ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

Update: 2024-06-28 12:08 GMT

ಹೇಮಂತ್ ಸೊರೇನ್ (Photo: PTI)

ಹೊಸದಿಲ್ಲಿ: ಜಾರ್ಖಂಡ್‌ನ ಮಾಜಿ ಸೀಎಂ ಹೇಮಂತ್‌ ಸೊರೇನ್‌ ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಜಾರ್ಖಂಡ್‌ ಹೈಕೋರ್ಟ್‌ ಅವರಿಗೆ ಇಂದು ಜಾಮೀನು ಮಂಜೂರುಗೊಳಿಸಿದೆ. ಭೂಹಗರಣವೊಂದಕ್ಕೆ ಸಂಬಂಧಿಸಿದಂತೆ ಅವರನ್ನು ಐದು ತಿಂಗಳ ಹಿಂದೆ ಬಂಧಿಸಲಾಗಿತ್ತು.

“ಜಾಮೀನು ಮಂಜೂರುಗೊಳಿಸಲಾಗಿದೆ. ಹೊರನೋಟಕ್ಕೆ ಹೇಮಂತ್‌ ಸೊರೇನ್ ತಪ್ಪಿತಸ್ಥರಲ್ಲ, ಜಾಮೀನಿನ ಮೇಲಿರುವಾಗ ಅವರು ಅಪರಾಧವೆಸಗುವ ಸಾಧ್ಯತೆಯಿಲ್ಲ ಎಂದು ನ್ಯಾಯಾಲಯ ಹೇಳಿದೆ,” ಎಂದು ಸೊರೇನ್‌ ಅವರ ವಕೀಲ ಅರುಣಭ್‌ ಚೌಧುರಿ ತಿಳಿಸಿದರು.

ಸೊರೇನ್ ವಿರುದ್ಧ ಬೇರೆ ಯಾವುದೇ ಪ್ರಕರಣ ಇಲ್ಲದೇ ಇರುವುದರಿಂದ ಅವರನ್ನು ಶೀಘ್ರ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಎರಡು ಶೂರಿಟಿಗಳು ಹಾಗೂ ರೂ 50,000 ಜಾಮೀನು ಬಾಂಡ್ ಮೇಲೆ ಅವರಿಗೆ ಜಾಮೀನು ನೀಡಲಾಯಿತು.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾ ನಾಯಕರಾಗಿರುವ ಸೊರೇನ್‌ ಅವರನ್ನು ಈಡಿ ಜನವರಿ 31ರಂದು ಬಂಧಿಸಿತ್ತು. ರಾಂಚಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 8.86 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಅವರು ಅಕ್ರಮ ಹಣ ವರ್ಗಾವಣೆ ಮತ್ತು ಫೋರ್ಜರಿ ಮಾಡಿದ ದಾಖಲೆಗಳನ್ನು ಸೃಷ್ಟಿಸಿದ್ದರೆಂಬ ಆರೋಪ ಅವರ ಮೇಲೆ ಈಡಿ ಹೊರಿಸಿತ್ತು.

ಅರ್ಜಿದಾರರು ಜಮೀನನ್ನು ಸ್ವಾಧೀನಪಡಿಸಿಕೊಂಡಿರುವುದು, ಅದರ ಒಡತನ ಹೊಂದಿರುವುದು ಅಥವಾ ಅದನ್ನು ಮರೆಮಾಡಿರುವುದು ನಿರ್ದಿಷ್ಟವಾಗಿ ಅಥವಾ ಪರೋಕ್ಷವಾಗಿ ಕಂಡುಬಂದಿಲ್ಲ,” ಎಂದು ನ್ಯಾಯಾಲಯ ಹೇಳಿದೆ.

ಹೇಮಂತ್‌ ಸೊರೇನ್‌ ತಮ್ಮ ವಿರುದ್ಧದ ಆರೋಪಗಳನ್ನು ಸದಾ ಅಲ್ಲಗಳೆದಿದ್ದರಲ್ಲದೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ಹಿನ್ನಡೆ ಸೃಷ್ಟಿಸಲು ತಮ್ಮನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದರು.

ಈ ಹಿಂದೆ ಅವರ ಜಾಮೀನು ಅರ್ಜಿಗಳನ್ನು ರಾಂಚಿ ವಿಶೇಷ ನ್ಯಾಯಾಲಯ, ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ಕೂಡ ತಿರಸ್ಕರಿಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News