ಕೇರಳದಲ್ಲಿ ವಿವಾಹಿತರಾದ ಜಾರ್ಖಂಡ್‌ನ ಭಿನ್ನ ಧರ್ಮೀಯ ಜೋಡಿ: ‘ಲವ್ ಜಿಹಾದ್’ ಆರೋಪ ನಿರಾಕರಿಸಿದ ಯುವತಿ

Update: 2025-03-02 19:48 IST
ಕೇರಳದಲ್ಲಿ ವಿವಾಹಿತರಾದ ಜಾರ್ಖಂಡ್‌ನ ಭಿನ್ನ ಧರ್ಮೀಯ ಜೋಡಿ: ‘ಲವ್ ಜಿಹಾದ್’ ಆರೋಪ ನಿರಾಕರಿಸಿದ ಯುವತಿ

Photo |  thenewsminute

  • whatsapp icon

ಕೇರಳ : ಪರಸ್ಪರ ಪ್ರೀತಿಸುತ್ತಿದ್ದ ಜಾರ್ಖಂಡ್‌ನ ಭಿನ್ನ ಧರ್ಮೀಯ ಜೋಡಿಯೊಂದು ಕುಟುಂಬಸ್ಥರು ವಿರೋಧದ ಮಧ್ಯೆ ಕೇರಳದಲ್ಲಿ ವಿವಾಹವಾಗಿ ಆಶ್ರಯ ಪಡೆದುಕೊಂಡಿದೆ. ಯುವತಿಯ ಕುಟುಂಬವು ಲವ್ ಜಿಹಾದ್ ಆರೋಪಿಸಿದ್ದು, ಯುವತಿಯು ಈ ಆರೋಪವನ್ನು ನಿರಾಕರಿಸಿದ್ದಾರೆ.

ಮುಹಮ್ಮದ್ ಗಾಲಿಬ್(30) ಮತ್ತು ಆಶಾ ವರ್ಮಾ(26)  ಕಳೆದ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅವರ ಪ್ರೀತಿಗೆ ಕುಟುಂಬಸ್ಥರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದರಿಂದ ಜಾರ್ಖಂಡ್‌ನಿಂದ 2,500 ಕಿಮೀ ದೂರದಲ್ಲಿರುವ ಕೇರಳಕ್ಕೆ ಈ ಜೋಡಿ ತೆರಳಿದ್ದಾರೆ. ಮುಹಮ್ಮದ್ ಗಾಲಿಬ್ ತನ್ನ ಸಹೋದ್ಯೋಗಿಗಳ ಮದುವೆಗೆ ಸಂಬಂಧಿಸಿದಂತೆ ಈ ಹಿಂದೆ ಎರಡು ಬಾರಿ ಕೇರಳಕ್ಕೆ ಭೇಟಿ ನೀಡಿದ್ದ. ಅಲಪ್ಪುಝ ಜಿಲ್ಲೆಯ ಕಾಯಂಕುಲಂನಲ್ಲಿ ಸ್ನೇಹಿತರ ಬೆಂಬಲದೊಂದಿಗೆ ಗಾಲಿಬ್ ಮತ್ತು ಆಶಾ ಫೆಬ್ರವರಿ 11ರಂದು ಮುಸ್ಲಿಂ ಸಂಪ್ರದಾಯದಂತೆ ವಿವಾಹವಾದರು. ಇದಾದ ಐದು ದಿನಗಳ ಬಳಿಕ ಹಿಂದೂ ಪದ್ಧತಿಯಂತೆ ವಿವಾಹವಾಗಿದ್ದಾರೆ.

ಆಶಾ ನಾಪತ್ತೆಯಾಗುತ್ತಿದ್ದಂತೆ ಆಕೆಯ ಕುಟುಂಬಸ್ಥರು ಜಾರ್ಖಂಡ್‌ನ ರಾಜ್ರಪ್ಪ ಪೊಲೀಸ್ ಠಾಣೆಯಲ್ಲಿ ಮುಹಮ್ಮದ್ ಗಾಲಿಬ್ ಮತ್ತು ಆತನ ಇಬ್ಬರು ಗೆಳೆಯರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 87ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಆಶಾ ಸಹೋದರ ರೌನಕ್ ಕುಮಾರ್ ವರ್ಮಾ ನೀಡಿದ ದೂರಿನ ಪ್ರಕಾರ, ʼಫೆಬ್ರವರಿ 9ರಂದು ತಂದೆ ಧ್ರುವ ಪ್ರಸಾದ್ ಕುಂಭ ಮೇಳಕ್ಕೆ ಹೋದಾಗ ಆಶಾ ನಾಪತ್ತೆಯಾಗಿದ್ದಾರೆ. ಹುಡುಕಾಟದ ಸಮಯದಲ್ಲಿ ಮುಹಮ್ಮದ್ ಗಾಲಿಬ್ ತನ್ನ ಸಹಚರರಾದ ಫೌಝಿ ಮತ್ತು ಇನ್ನೋರ್ವನ ಜೊತೆ ಸೇರಿಕೊಂಡು ಆಕೆಯನ್ನು ಅಪಹರಿಸಿದ್ದಾರೆ. ನನ್ನ ಸಹೋದರಿ ಲವ್ ಜಿಹಾದ್ ಬಲೆಯಲ್ಲಿ ಸಿಲುಕಿದ್ದಾಳೆ. ಆಕೆಯನ್ನು ವಿದೇಶಕ್ಕೆ ಕರೆದೊಯ್ಯುವ ಸಾಧ್ಯತೆ ಇದೆʼ ಎಂದು ಆರೋಪಿಸಿದ್ದಾರೆ.

ಇದರ ಬೆನ್ನಲ್ಲೇ ರಕ್ಷಣೆ ನೀಡುವಂತೆ ಕೋರಿ ಜೋಡಿ ಕೇರಳ ನ್ಯಾಯಾಲಯದ ಮೊರೆ ಹೋಗಿದೆ. ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಆಶಾ ಮತ್ತು ಗಾಲಿಬ್‌ಗೆ ರಕ್ಷಣೆ ನೀಡುವಂತೆ  ಫೆಬ್ರವರಿ 27ರಂದು ಮಧ್ಯಂತರ ಆದೇಶ ನೀಡಿದೆ. ಅವರನ್ನು ಬಲವಂತವಾಗಿ ಜಾರ್ಖಂಡ್‌ಗೆ ಕರೆದೊಯ್ಯದಂತೆ ನೋಡಿಕೊಳ್ಳಬೇಕು ಎಂದು ಕಾಯಂಕುಲಂ ಠಾಣಾಧಿಕಾರಿಗೆ ಸೂಚಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಆಶಾ, ಲವ್ ಜಿಹಾದ್ ಮತ್ತು ಅಪಹರಣದ ಆರೋಪವನ್ನು ನಿರಾಕರಿಸಿದ್ದಾರೆ. ನಾನು ಮತ್ತು ಗಾಲಿಬ್ ಕಳೆದ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ. ಇತ್ತೀಚೆಗೆ ನನ್ನ ಕುಟುಂಬಕ್ಕೆ ನಮ್ಮ ಪ್ರೀತಿಯ ಬಗ್ಗೆ ಗೊತ್ತಾಗಿದೆ. ಆಗ ನಾನು ಗಾಲಿಬ್‌ ಅವರಲ್ಲಿ ರಾಜ್ಯವನ್ನು ತೊರೆದು ಕೇರಳಕ್ಕೆ ಹೋಗುವಂತೆ ಹೇಳಿದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಮುಹಮ್ಮದ್ ಗಾಲಿಬ್, ಈ ಬೆಳವಣಿಗೆ ರಾಮಗಢ ಜಿಲ್ಲೆಯ ಚಿತಾರ್‌ಪುರದಲ್ಲಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಿದೆ. ನನ್ನ ಕುಟುಂಬವನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಿದ್ದೇನೆ. ಆಶಾ ಕುಟುಂಬ ಈ ಭಾಗದಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದರಿಂದ ನಮ್ಮ ಕುಟುಂಬದ ಸುರಕ್ಷತೆಯ ಬಗ್ಗೆ ನನಗೆ ಭಯವಿದೆ. ಘಟನೆ ಬಳಿಕ ನನ್ನ ಕುಟುಂಬ ನನ್ನ ಜೊತೆ ಅಸಮಾಧಾನಗೊಂಡಿದೆ. ಕೆಲ ದಿನಗಳು ಕಳೆದರೆ ಇವೆಲ್ಲವೂ ಸರಿಯಾಗಲಿದೆ ಎಂಬ ನಿರೀಕ್ಷೆ ಇದೆ ಎಂದು ಗಾಲಿಬ್ ಹೇಳಿದ್ದಾರೆ.

ಗಾಲಿಬ್ ಮತ್ತು ಆಶಾ ಪರ ವಕೀಲೆ ಗಯಾ ಎಸ್ ಲತಾ ಪ್ರತಿಕ್ರಿಯಿಸಿ, ನ್ಯಾಯಾಲಯದ ಆದೇಶದ ನಂತರ ಗಾಲಿಬ್‌ನ್ನು ಬಂಧಿಸಲು ಕಾಯಂಕುಲಂಗೆ ಬಂದಿದ್ದ ಜಾರ್ಖಂಡ್ ನ ಇಬ್ಬರು ಪೊಲೀಸರು ವಾಪಾಸ್ಸಾಗಿದ್ದಾರೆ. ಗಾಲಿಬ್ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ರಾಂಚಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News