ಬಿಜೆಪಿ ಸೇರ್ಪಡೆಯಾದ ಆಪ್ ಮಾಜಿ ಸಚಿವ ಕೈಲಾಶ್ ಗೆಹ್ಲೋಟ್
ಹೊಸದಿಲ್ಲಿ: ಮಾಜಿ ಸಚಿವ ಹಾಗೂ ಆಪ್ ನ ಹಿರಿಯ ನಾಯಕ ಕೈಲಾಶ್ ಗೆಹ್ಲೋಟ್ ಇಂದು ರಾಷ್ಟ್ರ ರಾಜಧಾನಿಯಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ನಿನ್ನೆಯಷ್ಟೆ ಅವರು ಆಪ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಕೇಂದ್ರ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಹಾಗೂ ಹರ್ಷ ಮಲ್ಹೋತ್ರಾ, ದಿಲ್ಲಿ ಬಿಜೆಪಿ ಘಟಕದ ಅಧ್ಯಕ್ಷ ವಿರೇಂದ್ರ ಸಚ್ ದೇವ್ ಹಾಗೂ ಬಿಜೆಪಿ ರಾಷ್ಟ್ರೀಯ ಮಾಧ್ಯದಮ ಮುಖ್ಯಸ್ಥ ಅನಿಲ್ ಬಲೂನಿ ಮತ್ತಿತರರ ಸಮ್ಮುಖದಲ್ಲಿ ಕೈಲಾಶ್ ಗೆಹ್ಲೋಟ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ನಂತರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೈಲಾಶ್ ಗೆಹ್ಲೋಟ್, ಸಿಬಿಐ ಮತ್ತು ಈಡಿ ಒತ್ತಡದ ಪರಿಣಾಮ ನಾನು ಆಪ್ ತೊರೆದಿದ್ದೇನೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ವಾಸ್ತವವೆಂದರೆ, ಆಪ್ ತನ್ನ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡಿದೆ” ಎಂದು ಆರೋಪಿಸಿದರು.
ನಜಾಫ್ ಗಢದ ಶಾಸಕರಾದ ಕೈಲಾಶ್ ಗೆಹ್ಲೋಟ್ ಅರವಿಂದ್ ಕೇಜ್ರಿವಾಲ್ ರ ನಿಕಟವರ್ತಿಯಾಗಿದ್ದರು.
ಗೆಹ್ಲೋಟ್ ಆಪ್ ತೊರೆದ ಕುರಿತು ಪ್ರತಿಕ್ರಿಯಿಸಿರುವ ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, "ಅವರಿಗೆ ಎಲ್ಲಿಗೆ ಬೇಕಾದರೂ ಹೋಗುವ ಸ್ವಾತಂತ್ರ್ಯವಿದೆ" ಎಂದು ಹೇಳಿದ್ದಾರೆ.