ಉತ್ತರ ಪ್ರದೇಶದ ಬಳಿಕ ಉತ್ತರಾಖಂಡದಲ್ಲಿ ಕನ್ವರ್‌ ಯಾತ್ರೆ ಮಾರ್ಗದ ಮಳಿಗೆಗಳು ಮಾಲಕರ ಹೆಸರು ಪ್ರದರ್ಶಿಸುವಂತೆ ಆದೇಶ

Update: 2024-07-20 08:55 GMT

ಸಾಂದರ್ಭಿಕ ಚಿತ್ರ (PTI)

ಹರಿದ್ವಾರ್:‌ ಉತ್ತರ ಪ್ರದೇಶದ ನಂತರ ಈಗ ಉತ್ತರಾಖಂಡದ ಆಡಳಿತವೂ ಕನ್ವರ್‌ ಯಾತ್ರೆಯ ಮಾರ್ಗದುದ್ದಕ್ಕೂ ಇರುವ ಮಳಿಗೆಗಳಿಗೆ ಸೂಚನೆ ನೀಡಿ ಮಾಲೀಕರ ಹೆಸರುಗಳನ್ನು ಪ್ರದರ್ಶಿಸುವಂತೆ ಆದೇಶಿಸಿದೆ. ಯಾವುದೇ ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ತಡೆಯಲು ಈ ಕ್ರಮ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡ ಸಿಎಂ ಪುಷ್ಕರ್ ಧಾಮಿ ಕೂಡ ಈ ಕ್ರಮ ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ ಕೆಲ ಅಂಗಡಿ ಮಾಲೀಕರು ನಕಲಿ ಹೆಸರುಗಳನ್ನು ಬಳಸಿದ ಉದಾಹರಣೆಗಳಿವೆ ಎಂದು ಅವರು ಹೇಳಿದ್ದಾರೆ.

“ಇದೊಂದು ಉತ್ತಮ ಕ್ರಮ. ಯಾರಾದರೂ ತಮ್ಮ ಗುರುತು ಏಕೆ ಮರೆಮಾಚಬೇಕು? ಈ ಕ್ರಮ ಪಾರದರ್ಶಕತೆಗೆ ಅಗತ್ಯವಾಗಿದೆ ಹಾಗೂ ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ವ್ಯಕ್ತಿಯನ್ನು ಗುರಿಯಾಗಿಸಿಲ್ಲ,” ಎಂದು ಅವರು ಹೇಳಿದರು.

ಜುಲೈ 12ರ ಸಭೆಯ ಬಳಿಕ ಜಾರಿಯಾದ ಕ್ರಮ ಹರಿದ್ವಾರದಲ್ಲಿ ವಾರ್ಷಿಕ ತೀರ್ಥಯಾತ್ರೆಯ ಪ್ರಾರಂಭದ ಸಮಯದಲ್ಲಿ ವ್ಯಾಪಾರ ನಡೆಸುವವರನ್ನು ಬಾಧಿಸಲಿದೆ. ಹರಿದ್ವಾರ ಮುನಿಸಿಪಲ್‌ ಕಾರ್ಪೊರೇಷಷನ್‌ಗೆ ಸೇರಿದ ಪಂತದೀಪ ಮೈದಾನದಲ್ಲಿ ನಡೆಯುವ 10 ದಿನಗಳ ಕನ್ವರ್‌ ಮೇಳ ಮಾರುಕಟ್ಟೆಯಲ್ಲಿ ಯಾತ್ರೆಗೆ ಸಂಬಂಧಿಸಿದ ವಸ್ತುಗಳನ್ನು ಹರಿದ್ವಾರ, ಮೀರತ್‌, ಬಿಜ್ನೋರ್‌ ಮತ್ತು ಮುಝಫ್ಫರನಗರದ ಮುಸ್ಲಿಂ ಸಮುದಾಯದ ವರ್ತಕರು ಮಾರಾಟ ಮಾಡುತ್ತಾರೆ.

ಆದರೆ ಇದೊಂದು ಸಾಮಾನ್ಯ ಆದೇಶ ಎಂದು ಹರಿದ್ವಾರ ಜಿಲ್ಲಾಡಳಿತ ಹೇಳಿದೆ. ಕಾನೂನು ಸುವ್ಯವಸ್ಥೆ ನಮ್ಮ ದೊಡ್ಡ ಆದ್ಯತೆ, ಯಾವುದೇ ಸಮಸ್ಯೆ ಎದುರಾಗದಂತೆ ಈ ಆದೇಶ ಹೊರಡಿಸಲಾಗಿದೆ ಎಂದು ಹರಿದ್ವಾರ ಡಿಎಂ ಧೀರಜ್‌ ಸಿಂಗ್‌ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News