ಕೇರಳ : ವಲಸೆ ಕಾರ್ಮಿಕೆಯ ನಾಲ್ಕು ತಿಂಗಳ ಮಗುವಿನ ಪಾಲಿಗೆ ಅಮ್ಮನಾದ ಪೊಲೀಸ್ ಅಧಿಕಾರಿ!
ಕೊಚ್ಚಿ: ಶಸ್ತ್ರಕ್ರಿಯೆಯ ನಂತರ ಉಸಿರಾಟದ ಸಮಸ್ಯೆಯಿಂದ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಬಿಹಾರ ಮೂಲದ ಮಹಿಳೆಯ ನಾಲ್ಕು ತಿಂಗಳು ಪ್ರಾಯದ ಮಗುವಿಗೆ ಎದೆ ಹಾಲುಣಿಸುವ ಮೂಲಕ ಸಿವಿಲ್ ಪೊಲೀಸ್ ಅಧಿಕಾರಿ ಆರ್ಯ ಮಾನವೀಯತೆ ಮೆರೆದಿರುವ ಘಟನೆ ಗುರುವಾರ ವರದಿಯಾಗಿದೆ.
ಎರ್ನಾಕುಲಂನ ವನಿತಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಆರ್ಯ ಅವರ ಈ ಕಾರ್ಯ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
ಬಿಹಾರದ ಮಹಿಳೆಯ ನಾಲ್ಕು ತಿಂಗಳು ಪ್ರಾಯದ ಮಗು ಸಹಿತ ನಾಲ್ಕು ಮಕ್ಕಳು ಅಸಹಾಯಕರಾಗಿರುವ ಕುರಿತು ಮಾಹಿತಿ ಲಭಿಸುತ್ತಿದ್ದಂತೆ ವನಿತಾ ಠಾಣೆಯ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಮಕ್ಕಳನ್ನು ಠಾಣೆಗೆ ಕರೆತಂದು ಅವರಿಗೆ ಆಹಾರ ಒದಗಿಸಿದ್ದರು. ಆದರೆ ನಾಲ್ಕು ತಿಂಗಳ ಮಗುವಿಗೆ ಎದೆ ಹಾಲು ಬೇಕಿದೆ ಎಂದು ತಿಳಿದು ಇತ್ತೀಚೆಗಷ್ಟೇ ಹೆರಿಗೆ ರಜೆಯಿಂದ ಕರ್ತವ್ಯಕ್ಕೆ ವಾಪಸಾಗಿದ್ದ ಆರ್ಯ ಮಗುವಿಗೆ ಎದೆ ಹಾಲುಣಿಸಿದರು. ನಂತರ ಮಕ್ಕಳನ್ನು ಕೊಚ್ಚಿಯ ಮಕ್ಕಳ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
ಮಕ್ಕಳ ಪೈಕಿ 13 ವರ್ಷದ ಪ್ರಾಯದ ಬಾಲಕಿ ತಮ್ಮ ತಂದೆ ಜೈಲಿನಲ್ಲಿರುವುದಾಗಿ ತಿಳಿಸಿದ್ದಾಳೆ. ಉಳಿದ ಇಬ್ಬರ ವಯಸ್ಸು ಐದು ಹಾಗೂ ಮೂರು ಆಗಿದೆ.