ಕೇರಳ | ರಸ್ತೆಯಲ್ಲಿ ಕುಸಿದುಬಿದ್ದ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ ಶಾಲಾ ಬಾಲಕಿಯರು : ವ್ಯಾಪಕ ಪ್ರಶಂಸೆ
ತಿರುವನಂತಪುರಂ: ಕೇರಳದ ಮಾಹೆಯಲ್ಲಿ ರಸ್ತೆಯಲ್ಲಿ ಕುಸಿದುಬಿದ್ದ ಮಹಿಳೆಗೆ ಆರನೇ ತರಗತಿಯ ಮೂವರು ವಿದ್ಯಾರ್ಥಿಗಳು ಪ್ರಥಮ ಚಿಕಿತ್ಸೆ ನೀಡುವ ವೀಡಿಯೊ ವೈರಲ್ ಆಗಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಕಣ್ಣೂರಿನ ಚೋಕ್ಲಿ ಪಟ್ಟಣದಲ್ಲಿ ಮಹಿಳೆಯೋರ್ವರು ಆಟೋ ರಿಕ್ಷಾ ಹತ್ತುವಾಗ ಕುಸಿದು ಬಿದ್ದಿದ್ದಾರೆ. ಈ ವೇಳೆ ವಿಪಿ ಓರಿಯೆಂಟಲ್ ಶಾಲೆಯ ವಿದ್ಯಾರ್ಥಿಗಳಾದ ಆಯಿಷಾ ಅಲೋನಾ, ಖದೀಜಾ ಕುಬ್ರಾ ಮತ್ತು ನಫೀಸತುಲ್ ಮಿಸ್ರಿಯಾ ಸಮಯ ಪ್ರಜ್ಞೆ ಮೆರೆದು ಮಹಿಳೆಯ ಪ್ರಾಣವನ್ನು ರಕ್ಷಿಸಿದ್ದಾರೆ.
ಬಾಲಕಿಯರು ಶಾಲೆಯಿಂದ ಮನೆಗೆ ತೆರಳುವಾಗ ಮಹಿಳೆ ಕುಸಿದು ಬಿದ್ದಿರುವುದನ್ನು ನೋಡಿ ತಕ್ಷಣ ಅವರ ಬಳಿಗೆ ಧಾವಿಸಿ ಬಂದು ಪ್ರಥಮ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದಾರೆ. ಮಹಿಳೆಯ ಕೈ ಮತ್ತು ಕಾಲುಗಳನ್ನು ಉಜ್ಜುವ ಮೂಲಕ ಬೆಚ್ಚಗಾಗಿಸಿದ್ದಾರೆ. ಆಕೆಗೆ ನೀರು ನೀಡಿ ಉಪಚರಿಸಿದ್ದಾರೆ. ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಬಾಲಕಿಯರ ಸಮಯಪ್ರಜ್ಞೆಯಿಂದ ಮಹಿಳೆಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
"ಶಿಕ್ಷಕ ಪಿವಿ ಲುಬಿನ್ ಅವರು ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ನಮಗೆ ಹೇಳಿಕೊಟ್ಟಿದ್ದಾರೆ. ನಾವು ಅವರ ಕೈಕಾಲುಗಳನ್ನು ನಿರಂತರವಾಗಿ ಉಜ್ಜುವ ಮೂಲಕ ಬೆಚ್ಚಗಾಗಿಸಿದ್ದೇವೆ. ಮಹಿಳೆಗೆ ಈ ವೇಳೆ ಪ್ರಜ್ಞೆ ಬಂದಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಹೇಳಿದ್ದಾರೆ.
ಈ ಕುರಿತ ವೀಡಿಯೊ ವೈರಲ್ ಆಗುತ್ತಿದ್ದಂತೆ ಬಾಲಕಿಯರ ಕಾರ್ಯದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು ಫೇಸ್ಬುಕ್ ಪೋಸ್ಟ್ ನಲ್ಲಿ ವಿದ್ಯಾರ್ಥಿಗಳನ್ನು ಶ್ಲಾಘಿಸಿದ್ದಾರೆ. ಚೋಕ್ಲಿ ವಿಪಿ ಓರಿಯಂಟಲ್ ಶಾಲೆ ವಿದ್ಯಾರ್ಥಿಗಳು ತಮ್ಮ ಪ್ರಥಮ ಚಿಕಿತ್ಸಾ ಪಾಠಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಮತ್ತು ಅವರಿಗೆ ಕಲಿಸಿದ ಶಿಕ್ಷಕರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.