ಕೊಚ್ಚಿ : ಶವರ್ಮಾ ಸೇವಿಸಿ ಯುವಕ ಮೃತ್ಯು
ಕೊಚ್ಚಿ: ವಿಷಪೂರಿತ ಆಹಾರ ಸೇವನೆಯ ಶಂಕೆಯ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಬುಧವಾರ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಕೊಟ್ಟಾಯಂನ ಟೀಕಾಯ್ ನ ರಾಹುಲ್ ಡಿ ನಾಯರ್ (22) ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ರಾಹುಲ್ ಅವರ ಒಳ ಅಂಗಾಂಗಗಳ ಪರೀಕ್ಷಾ ವರದಿ ಬಂದ ನಂತರವಷ್ಟೆ ಸಾವಿನ ಕಾರಣ ತಿಳಿದು ಬರಲಿದೆ ಎಂದು ಹೇಳಿದ್ದಾರೆ ಎಂದು onmanorama.com ವರದಿ ಮಾಡಿದೆ.
ವಿಶೇಷ ಆರ್ಥಿಕ ವಲಯ(ಎಸ್ ಇ ಝಡ್)ದಲ್ಲಿ ಉದ್ಯೋಗಿಯಾಗಿದ್ದ ರಾಹುಲ್, ಚಿಟ್ಟೆತುಕುರದಲ್ಲಿ ತಮ್ಮ ಗೆಳೆಯರೊಂದಿಗೆ ವಾಸಿಸುತ್ತಿದ್ದರು. ಅ.18ರಂದು ಮಾವೆಲಿಪುರಂನ ಲೀ ಹಯಾತ್ ಹೋಟೆಲ್ ನಿಂದ ಆನ್ ಲೈನ್ ಆರ್ಡರ್ ಮಾಡಿ ತರಿಸಿದ್ದ ಶವರ್ಮಾ (ಮಾಂಸ ತುಂಬಿದ ಅರೇಬಿಯನ್ ಸುರುಳಿ)ವನ್ನು ರಾಹುಲ್ ಸೇವಿಸಿದ ನಂತರ ಪ್ರಜ್ಞಾಹೀನರಾದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅ.19ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ರಾಹುಲ್, ನಂತರ ತಮ್ಮ ನಿವಾಸಕ್ಕೆ ಮರಳಿದ್ದರು. ಆದರೆ, ಅವರು ನಿಶ್ಯಕ್ತನಾಗಿದ್ದೇನೆ ಎಂದು ಹೇಳಿದ ನಂತರ ಮತ್ತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರವಿವಾರ ಬೆಳಗ್ಗೆ 10.30 ಗಂಟೆ ಸುಮಾರಿಗೆ ಹೃದಯ ಸ್ತಂಭನ ಸ್ಥಿತಿಯಲ್ಲಿ ರಾಹುಲ್ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ತರಲಾಗಿತ್ತು ಎಂದು ಕಕ್ಕನಾಡ್ ನಲ್ಲಿನ ಸನ್ ರೈಸ್ ಆಸ್ಪತ್ರೆಯು ಬಿಡುಗಡೆ ಮಾಡಿರುವ ಮೆಡಿಕಲ್ ಬುಲೆಟಿನ್ನಲ್ಲಿ ಹೇಳಲಾಗಿದೆ. “ರೋಗಿಗೆ ಅ.19ರಿಂದ ಜ್ವರ ಹಾಗೂ ಭೇದಿಯ ಲಕ್ಷಣವಿತ್ತು. ಅವರಿಗೆ ವೆಂಟಲೇಟರ್ ನೆರವು ಒದಗಿಸಲಾಗಿತ್ತು. ತೀವ್ರ ಆಘಾತ ಸ್ಥಿತಿಯಲ್ಲಿದ್ದರು. ಅವರು ತೀವ್ರ ನಿಘಾ ಘಟಕ ತಂಡದ ಆರೈಕೆಯಲ್ಲಿದ್ದರು. ಅವರಲ್ಲಿ ತೀವ್ರ ಸ್ವರೂಪದ ರಕ್ತ ನಂಜು ಹಾಗೂ ಬಹು ಅಂಗಾಂಗ ವೈಫಲ್ಯದ ಲಕ್ಷಣಗಳು, ಚಿಹ್ನೆಗಳಿದ್ದವು. ಉತ್ತಮ ಪ್ರಯತ್ನಗಳ ಹೊರತಾಗಿಯೂ ರೋಗಿಯ ಆರೋಗ್ಯವು ಕ್ಷೀಣಿಸಿತು ಹಾಗೂ ಅ.25ರ ಮಧ್ಯಾಹ್ನ 2.55ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು” ಎಂದು ಬುಲೆಟಿನ್ ಹೇಳಲಾಗಿದೆ.
“ವಿಷಪ್ರಾಶನವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದರೆ, ಅದು ಶವರ್ಮಾ ಸೇವನೆಯಿಂದಲೇ ಆಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಪರೀಕ್ಷಾ ವರದಿ ಬರುವವರೆಗೂ ಕಾಯಬೇಕಿದೆ. ರಾಹುಲ್ ಅವರ ಮೂತ್ರಪಿಂಡ ಹಾಗೂ ಯಕೃತ್ತಿಗೆ ಹಾನಿಯಾಗಿದ್ದು, ಅವರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ” ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ತ್ರಿಕ್ಕಕರ ನಗರಸಭೆಯು ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ರೆಸ್ಟೋರೆಂಟ್ ಬಾಗಿಲು ಮುಚ್ಚಿಸಿದ್ದು, ಪೊಲೀಸರು ಆ ರೆಸ್ಟೋರೆಂಟ್ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಹಾರ ಸುರಕ್ಷತಾ ಇಲಾಖೆ ಹಾಗೂ ವಿಧಿವಿಜ್ಞಾನ ಇಲಾಖೆಯು ಜಂಟಿ ತಪಾಸಣೆ ನಡೆಸಿದರೂ, ರಾಹುಲ್ ಶವರ್ಮಾ ಸೇವಿಸಿದ ದಿನದಂದು ತಯಾರಿಸಲಾದ ಶವರ್ಮಾದ ಮಾದರಿಯನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ.
ರೆಸ್ಟೋರೆಂಟ್ ನ ಆಹಾರದ ಮಾದರಿಯೊಂದನ್ನು ಪರೀಕ್ಷೆಗಾಗಿ ರವಾನಿಸಲಾಗಿದೆ. ಈ ಕುರಿತು ಕೂಡಲೇ ವರದಿಯೊಂದನ್ನು ಸಲ್ಲಿಸುವಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚನೆ ನೀಡಿದ್ದಾರೆ.
ರಾಹುಲ್ ಅಂತ್ಯಕ್ರಿಯೆ ಇನ್ನಷ್ಟೇ ನಡೆಯಬೇಕಿದ್ದು, ಮೃತ ರಾಹುಲ್ ತಮ್ಮ ತಂದೆ ಕೆ.ಕೆ.ದಿವಾಕರನ್ ನಾಯರ್, ತಾಯಿ ಎಂ.ಪಿ.ಸಿಲ್ವಿ ಹಾಗೂ ಸಹೋದರ ಕಾರ್ತಿಕ್ ಮತ್ತು ಸಹೋದರಿ ಭವ್ಯರನ್ನು ಅಗಲಿದ್ದಾರೆ.