ಗಾಂಧಿ ಸಿನೆಮಾ ಹೊರಬರುವ ತನಕ ಜಗತ್ತಿಗೆ ಗಾಂಧೀಜಿ ಬಗ್ಗೆ ಗೊತ್ತಿರಲಿಲ್ಲ: ಪ್ರಧಾನಿ ಮೋದಿಯ ಅಚ್ಚರಿ ಹೇಳಿಕೆ

Update: 2024-05-29 11:18 GMT

ಪ್ರಧಾನಿ ನರೇಂದ್ರ ಮೋದಿ (Photo: X/@narendramodi)

ಹೊಸದಿಲ್ಲಿ: ಮಹಾತ್ಮ ಗಾಂಧಿ ಅವರ ಜೀವನವನ್ನು ಬಿಂಬಿಸುವ ಗಾಂಧಿ ಸಿನೆಮಾ ಬರುವ ತನಕ‌ ಜಗತ್ತಿನಲ್ಲಿ ಯಾರಿಗೂ ಅವರ ಬಗ್ಗೆ ತಿಳಿದಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೋದಿ, ಮಹಾತ್ಮ ಗಾಂಧಿ ದೊಡ್ಡ ವ್ಯಕ್ತಿಯಾಗಿದ್ದರೂ ಜಗತ್ತಿಗೆ ಅವರ ಬಗ್ಗೆ ತಿಳಿದಿರಲಿಲ್ಲ, ಜಗತ್ತು ಅವರ ಬಗ್ಗೆ ತಿಳಿಯುವಂತಾಗಲು ಎಲ್ಲಾ ಭಾರತೀಯ ರಾಜಕೀಯ ನಾಯಕರು ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರದ ಈ ಅವಧಿಯಲ್ಲಿ ಶ್ರಮಿಸಬೇಕು ಎಂದು ಪ್ರಧಾನಿ ಹೇಳಿಕೊಂಡರು.

ಮೋದಿ ಅವರ ಸಂದರ್ಶನದ ಈ ತುಣುಕು ವೈರಲ್‌ ಆಗಿದ್ದು ಸಿನಿಮಾದಲ್ಲಿ ಗಾಂಧೀಜಿಯ ಜೀವನ ತತ್ವಗಳ ಬಗ್ಗೆ ತಿಳಿದ ಬಂದ ನಂತರ ಅವರಿಗೆ ಜಾಗತಿಕ ಮನ್ನಣೆ ಇನ್ನಷ್ಟು ಹೆಚ್ಚಾಯಿತು ಎಂದಿದ್ದಾರೆ.

“ಜಗತ್ತಿನ ವಿವಿಧೆಡೆ ಸಂಚರಿಸಿದ ನಂತರ ನಾನು ಹೇಳುತ್ತಿದ್ದೇನೆ, ಮಹಾತ್ಮ ಗಾಂಧಿ ಅವರನ್ನು ಗಮನದ ಕೇಂದ್ರಬಿಂದು ಮಾಡಬೇಕಿತ್ತು.” ಎಂದು ಪ್ರಧಾನಿ ಹೇಳಿದರು.

“ಮಹಾತ್ಮ ಗಾಂಧಿ ಮಹಾನ್‌ ವ್ಯಕ್ತಿಯಾಗಿದ್ದರು. ಕಳೆದ 75 ವರ್ಷಗಳಲ್ಲಿ ಅವರಿಗೆ ಜಾಗತಿಕ ಮನ್ನಣೆ ಒದಗಿಸಿಕೊಡುವುದು ನಮ್ಮ ಕರ್ತವ್ಯವಾಗಿರಲಿಲ್ಲವೇ? ಯಾರಿಗೂ ಗೊತ್ತಿರಲಿಲ್ಲ. ಈ ವಿಚಾರದಲ್ಲಿ ನನ್ನನ್ನು ಕ್ಷಮಿಸಿ. ಮೊದಲ ಬಾರಿಗೆ ಗಾಂಧಿ ಸಿನಿಮಾ ಮಾಡಿದಾಗ, ಅವರು ಯಾರಾಗಿರಬಹುದೆಂಬ ಕುತೂಹಲ ಜಗತ್ತಿಗೆ ಮೂಡಿತ್ತು. ಜಗತ್ತು ಮಾರ್ಟಿನ್‌ ಲೂಥರ್‌ ಕಿಂಗ್‌, ನೆಲ್ಸನ್‌ ಮಂಡೇಲಾ ಬಗ್ಗೆ ತಿಳಿದಿತ್ತು, ಗಾಂಧೀಜಿ ಅವರಿಗೇನು ಕಡಿಮೆಯಾಗಿರಲಿಲ್ಲ. ಇದನ್ನು ನಾವು ಒಪ್ಪಬೇಕು,” ಎಂದು ಪ್ರಧಾನಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News