ಕೊಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ: ಪೊಲೀಸರು- ಐಎಂಎ ನಡುವಿನ ವಾಕ್ಸಮರಕ್ಕೆ ಕಾರಣವಾದ ಕೆಂಪು ಟಿ-ಷರ್ಟ್ ಧರಿಸಿದ ವ್ಯಕ್ತಿ!
ಕೊಲ್ಕತ್ತಾ: ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ನಡೆದ ಆಗಸ್ಟ್ 9ರಂದು ರಾತ್ರಿಯದ್ದು ಎನ್ನಲಾದ ವೀಡಿಯೊವೊಂದು ಸೋರಿಕೆಯಾಗಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಕೆಂಪು ಟಿ-ಷರ್ಟ್ ಧರಿಸಿದ ವ್ಯಕ್ತಿಯೊಬ್ಬ ಕಾಣಿಸುತ್ತಿದ್ದು, ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದರಿಂದ ತೃಪ್ತರಾಗದ ಪ್ರತಿಭಟನಾನಿರತ ವೈದ್ಯರು ಕೆಂಪು ಟಿ-ಷರ್ಟ್ ಧರಿಸಿದ ವ್ಯಕ್ತಿ ಕುಖ್ಯಾತ ಉತ್ತರ ಬಂಗಾಳ ಲಾಬಿಯ ಸದಸ್ಯ ಎಂದು ಪ್ರತಿಪಾದಿಸಿದ್ದಾರೆ. ಇದೀಗ ವೀಡಿಯೊ ಪೊಲೀಸರು ಹಾಗೂ ವೈದ್ಯರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಯಾವುದೇ ಕೆಲಸವಿಲ್ಲದ ಆ ವ್ಯಕ್ತಿ ಏಕೆ ಅಪರಾಧ ಸ್ಥಳದಲ್ಲಿರಬೇಕು ಎಂದು ವೈದ್ಯರು ಪ್ರಶ್ನಿಸಿದ್ದು, ಆತ ಬೆರಳಚ್ಚು ತಜ್ಞ ಆದ್ದರಿಂದ ತನಿಖಾ ತಂಡದ ಸದಸ್ಯ ಎನ್ನುವುದು ಪೊಲೀಸರ ಸಮರ್ಥನೆ.
ಘಟನಾ ಸ್ಥಳದಲ್ಲಿ ಮೃತ ವೈದ್ಯೆಯ ದೇಹದ ಪಕ್ಕದಲ್ಲೇ ಕೆಂಪು ಟಿ-ಷರ್ಟ್ ಧರಿಸಿದ ಈ ವ್ಯಕ್ತಿ ನಿಂತಿರುವುದು ಕಾಣಿಸುತ್ತಿದೆ. ಆತ ಉತ್ತರ ಬಂಗಾಳ ಲಾಬಿ ನಡೆಸುತ್ತಿರುವ 'ಹೆಲ್ತ್ ಸಿಂಡಿಕೇಟ್ ನ ಪ್ರಭಾವಿ ಸದಸ್ಯನಾಗಿದ್ದು, ಆತನ ಹೆಸರು ಅವೀಕ್ ಡೇ ಎನ್ನುವುದು ಐಎಂಎ ಬಂಗಾಳ ಘಟಕದ ವಾದ.
ಈ ಸೋರಿಕೆಯಾದ ವಿಡಿಯೊ ಶುಕ್ರವಾರ ಜಾಲತಾಣಗಳಲ್ಲಿ ಓಡಾಡುತ್ತಿದ್ದು, ಟಿ-ಷರ್ಟ್ ಧರಿಸಿದ ವ್ಯಕ್ತಿಯ ಬಗ್ಗೆ ಸಂತ್ರಸ್ತ ವೈದ್ಯೆಯ ಪೋಷಕರು ಕೂಡಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಸಂಜೆ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಪೊಲೀಸರು, ಕೆಂಪು ಟಿ-ಷರ್ಟ್ ಧರಿಸಿದ ವ್ಯಕ್ತಿ ಬೆರಳಚ್ಚು ತಜ್ಞ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಾದವನ್ನು ಒಪ್ಪದ ಐಎಂಎ ಸದಸ್ಯರು, ಡಾ.ಅವಿಕ್ ಡೇ ಯಾವಾಗ ಬೆರಳಚ್ಚು ತಜ್ಞರಾದರು? ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ಭಾಗವೂ ಅಲ್ಲದ ಅವರು ಅಪರಾಧ ಸ್ಥಳಕ್ಕೆ ಬಂದಿದ್ದಾದರೂ ಏಕೆ? ಎಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳಲ್ಲದ ಹಲವು ಮಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದನ್ನು ಕಿರಿಯ ವೈದ್ಯರು ಮೊದಲ ದಿನದಿಂದಲೇ ಆಕ್ಷೇಪಿಸುತ್ತಿದ್ದಾರೆ.