ಕೊಲ್ಕತ್ತಾ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ: ಆರ್.ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಚಾರ್ಯ, ಇತರ ಮೂವರ ಬಂಧನ
ಕೊಲ್ಕತ್ತಾ: ಇಲ್ಲಿನ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ಏಜೆನ್ಸಿ (ಸಿಬಿಐ) ಸೋಮವಾರ, ಮಾಜಿ ಪ್ರಾಚಾರ್ಯ ಸಂದೀಪ್ ಘೋಷ್ ಅವರನ್ನು ಹಣಕಾಸು ದುರ್ನಡತೆ ಆರೋಪದಲ್ಲಿ ಬಂಧಿಸಿದೆ.
ಘೋಷ್ ಅವರನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್ ಮತ್ತು ಆಸ್ಪತ್ರೆಗೆ ಸಾಧನ- ಸಲಕರಣೆಗಳನ್ನು ಪೂರೈಕೆ ಮಾಡುತ್ತಿರುವ ಇಬ್ಬರು ವ್ಯಾಪಾರಿಗಳನ್ನು ಬಂಧಿಸಲಾಗಿದೆ. ಪ್ರಾಚಾರ್ಯ ಸಂದೀಪ್ ಘೋಷ್ ನ ಭದ್ರತಾ ಸಿಬ್ಬಂದಿ ಅಫ್ಸರ್ ಅಲಿ ಕಾನ್ ಹಾಗೂ ವ್ಯಾಪಾರಿಗಳಾದ ಬಿಪ್ಲವ್ ಸಿನ್ಹಾ ಹಾಗೂ ಸುಮನ್ ಹಜ್ರಾ ಅವರನ್ನು ಬಂಧಿಸಲಾಗಿದೆ.
ಆಸ್ಪತ್ರೆಯ ಹಣ ದುರುಪಯೋಗ ಪ್ರಕರಣವನ್ನು ರಾಜ್ಯ ಸರ್ಕಾರ ನೇಮಕ ಮಾಡಿದ ವಿಶೇಷ ತನಿಖಾ ತಂಡದಿಂದ ಸಿಬಿಐಗೆ ವರ್ಗಾಯಿಸುವಂತೆ ಆಗಸ್ಟ್ 23ರಂದು ಕೊಲ್ಕತ್ತಾ ಹೈಕೋರ್ಟ್ ಆದೇಶ ನೀಡಿತ್ತು. ಇದಕ್ಕೂ ಮುನ್ನ ಆಸ್ಪತ್ರೆಯಲ್ಲಿ ಸಂದೀಪ್ ಘೋಷ್ ಅವಧಿಯಲ್ಲಿ ನಡೆದ ಹಣಕಾಸು ದುರುಪಯೋಗ ಆರೋಪಗಳ ಸಂಬಂಧ ಜಾರಿ ನಿರ್ದೇಶನಾಲಯ ತನಿಖೇ ನಡೆಸಬೇಕು ಎಂದು ಆಸ್ಪತ್ರೆಯ ಸೌಲಭ್ಯಗಳ ವಿಭಾಗದ ಉಪ ಅಧೀಕ್ಷಕ ಡಾ.ಅಖ್ತರ್ ಅಲಿ ಅವರು ಆಗ್ರಹಿಸಿದ್ದರು.
ಸತತ 15ನೇ ದಿನವೂ ಸಾಲ್ಟ್ ಲೇಕ್ ಕಚೇರಿಯಲ್ಲಿ ಸಂದೀಪ್ ಘೋಷ್ ಅವರನ್ನು ವಿಚಾರಣೆಗೆ ಗುರಿಪಡಿಸಿದ ಸಿಬಿಐ, ಅವರನ್ನು ತನಿಖಾ ಸಂಸ್ಥೆಯ ಭ್ರಷ್ಟಾಚಾರ ವಿರೋಧಿ ವಿಭಾಘದ ಕಚೇರಿ ಇರುವ ನಿಜಾಮ್ ಪ್ಯಾಲೇಸ್ ಕಚೇರಿಗೆ ಕರೆದೊಯ್ದು, ಅಧಿಕೃತವಾಗಿ ಬಂಧಿಸಿತು.
ಆರ್.ಜಿ ಕರ್ ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಹತ್ಯೆ ನಡೆದ ಬಳಿಕ ಕಳೆದ 24 ದಿನಗಳಲ್ಲಿ ನಡೆದ ಎರಡನೇ ಬಂಧನ ಇದಾಗಿದೆ. ಇದಕ್ಕೂ ಮುನ್ನ ಕೊಲ್ಕತ್ತಾ ಪೊಲೀಸ್ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ನನ್ನು ಬಂಧಿಸಲಾಗಿತ್ತು.