ಪತ್ನಿಯ ಹೆರಿಗೆಗೆ ಆರ್ಥಿಕ ನೆರವಿಗೆ ಮಣಿಪುರಕ್ಕೆ ಮರಳಿದ್ದ ಪತಿ ಬಂಡುಕೋರರ ದಾಳಿಗೆ ಬಲಿ
ಗುವಾಹಟಿ : ಮಣಿಪುರದಲ್ಲಿ ನಡೆಯುತ್ತಿರುವ ಕುಕಿ ಮತ್ತು ಮೈತೇಯಿ ಸಮುದಾಯದ ನಡುವಿನ ಜನಾಂಗೀಯ ಹಿಂಸಾಚಾರ ದಿನದಿನಕ್ಕೂ ದಾರುಣ ಸ್ವರೂಪ ಪಡೆಯತೊಡಗಿದೆ. ಕೆಲ ದಿನಗಳ ಹಿಂದಷ್ಟೇ ಹ್ಮಾರ್ ಸಮುದಾಯದ ಶಿಕ್ಷಕಿಯೊಬ್ಬರನ್ನು ಹತ್ಯೆಗೈದಿದ್ದ ಮೈತೇಯಿ ಬಂಡುಕೋರರು, ತನ್ನ ಪತ್ನಿಗೆ ಸುರಕ್ಷಿತ ಹೆರಿಗೆ ಮಾಡಿಸಲೆಂದು ಆರ್ಥಿಕ ನೆರವಿಗಾಗಿ ಮಣಿಪುರಕ್ಕೆ ಮರಳಿದ್ದ ಕುಕಿ ಸಮುದಾಯದ ಹವಜೋಯೆಲ್ ಡೌಂಗೆಲ್ ಎಂಬ ವ್ಯಕ್ತಿಯನ್ನು ಅಮಾನುಷವಾಗಿ ಹತ್ಯೆಗೈದಿದ್ದಾರೆ.
ಮಣಿಪುರದ ಟಾಮೆಂಗ್ಲಾಂಗ್ ಜಿಲ್ಲೆಯ ಪಾಂಗ್ಮೋಲ್ ಗ್ರಾಮದ ನಿವಾಸಿಯಾದ ಹವಜೋಯೆಲ್ ಡೌಂಗೆಲ್ ಅವರ ಪತ್ನಿ ನೆಂಗ್ಬೋಯಿ ಡೌಂಗೆಲ್ ತುಂಬು ಗರ್ಭಿಣಿಯಾಗಿದ್ದರು. ರಾಜ್ಯದಲ್ಲಿ ಮತ್ತೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದು, ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಹವಜೋಯೆಲ್ ಡೌಂಗೆಲ್ ತಮ್ಮ ಕುಟುಂಬದೊಂದಿಗೆ ಆಶ್ರಯ ಕೋರಿ ಅಸ್ಸಾಂನಲ್ಲಿನ ಹ್ಮಾರ್ಖೌಲಿಯೆನ್ ನಿರಾಶ್ರಿತರ ಶಿಬಿರಕ್ಕೆ ಪರಾರಿಯಾಗಿದ್ದರು.
ನಿರ್ವಸತಿಗರಾದರೂ ಹವಜೋಯೆಲ್ ಡೌಂಗೆಲ್ ತಮ್ಮ ಕುಟುಂಬದ ಕಡೆ ಹೊಂದಿದ್ದ ಅರ್ಪಣಾ ಮನೋಭಾವದಲ್ಲಿ ಒಂದಿನಿತೂ ಕುಂದುಂಟಾಗಿರಲಿಲ್ಲ. ತನ್ನ ಪತ್ನಿ ನೆಂಗ್ಬೋಯಿ ಡೌಂಗೆಲ್ ರ ಪ್ರಸವದ ದಿನ ಹತ್ತಿರ ಬರುತ್ತಿದ್ದಂತೆ, ತನ್ನ ಪತ್ನಿ ಹಾಗೂ ಮಗುವಿನ ಸುರಕ್ಷಿತ ಹೆರಿಗೆಗಾಗಿ ಆರ್ಥಿಕ ನೆರವಿಗಾಗಿ ಹವಜೋಯೆಲ್ ಡೌಂಗೆಲ್ ಮತ್ತೆ ತಮ್ಮ ತವರಿಗೆ ಮರಳಿದ್ದರು. ಆದರೆ, ಅವರ ಈ ಪ್ರೀತಿ ಮತ್ತು ಜವಾಬ್ದಾರಿ ಅವರ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು.
ಮೂಲಗಳ ಪ್ರಕಾರ, ಹವಜೋಯೆಲ್ ಡೌಂಗೆಲ್ ರನ್ನು ಶಂಕಿತ ಮೈತೇಯಿ ಬಂಡುಕೋರರು ಅಪಹರಿಸಿದ್ದರು ಎನ್ನಲಾಗಿದೆ. ನಂತರ ಅವರನ್ನು ಹತ್ಯೆಗೈದಿರುವ ಉಗ್ರರು, ಅವರ ಮೃತದೇಹವನ್ನು ಜಿರಿಬಾಮ್ ಜಿಲ್ಲೆಯ ಅಂಗ್ಲಾಪುರ್ ಗ್ರಾಮದ ಬಳಿಯ ಮೋರಿಯೊಂದರಲ್ಲಿ ಎಸೆದು ಪರಾರಿಯಾಗಿದ್ದಾರೆ.
ಆದರೆ, ಈ ದುರಂತ ಘಟನೆಯ ಬಗ್ಗೆ ಅರಿವಿಲ್ಲದ ಹವಜೋಯೆಲ್ ಪತ್ನಿ ನೆಂಗ್ಬೋಯಿ ಡೌಂಗೆಲ್, ನಿರಾಶ್ರಿತರ ಶಿಬಿರದಲ್ಲಿ ನವಜಾತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅದೇ ದಿನ ಆಕೆಯ ಪತಿಯ ಛಿದ್ರಗೊಂಡ ಮೃತದೇಹವು ಚೂರಚಂದ್ ಪುರ್ ಜಿಲ್ಲೆಯಿಂದ ನಿರಾಶ್ರಿತರ ಶಿಬಿರಕ್ಕೆ ತಲುಪಿದೆ.
ತನ್ನ ಪತ್ನಿ ಹಾಗೂ ನವಜಾತ ಶಿಶುವಿಗಾಗಿ ಹವಜೋಯೆಲ್ ಡೌಂಗೆಲ್ ತನ್ನ ಜೀವವನ್ನೇ ಅಪಾಯಕ್ಕೆ ಒಡ್ಡಿಕೊಂಡರು ಎಂದು ಕುಕಿ ಸಮುದಾಯದ ನಾಗರಿಕ ಸಂಘಟನೆಗಳು ಹೇಳಿವೆ. ಈ ಘಟನೆಯಿಂದ ಹವಜೋಯೆಲ್ ಕುಟುಂಬವು ದಿಗ್ಮೂಢವಾಗಿದ್ದು, ನವಜಾತ ಶಿಶುವನ್ನು ಸಂಭ್ರಮದಿಂದ ಸ್ವಾಗತಿಸಲೂ ಸಾಧ್ಯವಾಗದಷ್ಟು ದುಃಖದಲ್ಲಿ ಮುಳುಗಿದೆ.
ಇದು ಕೇವಲ ಒಂದು ಪ್ರತ್ಯೇಕ ಘಟನೆಯಲ್ಲ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡಾಗಿನಿಂದಲೂ ಇಂತಹ ಅನೇಕ ದಾರುಣ ಘಟನೆಗಳು ವರದಿಯಾಗುತ್ತಲೇ ಇವೆ. ಕಳೆದ ಎರಡು ವಾರಗಳಲ್ಲಿ ಹ್ಮಾರ್ ಸಮುದಾಯದ ಶಿಕ್ಷಕಿಯೊಬ್ಬರನ್ನು ಶಂಕಿತ ಮೈತೇಯಿ ಬಂಡುಕೋರರು ಹತ್ಯೆಗೈದಿದ್ದರೆ, ಮೈತೇಯಿ ಸಮುದಾಯದ ಎಂಟು ಮಂದಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಹತ್ಯೆಗೈದಿದ್ದರು.
ಈ ಪೈಕಿ ಆರು ಮಂದಿ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಮೃತಪಟ್ಟವರಲ್ಲಿ ಓರ್ವ ಹಸುಗೂಸು ಹಾಗೂ ಇಬ್ಬರು ಮಕ್ಕಳು ಸೇರಿದ್ದರು. ಅವರನ್ನೆಲ್ಲ ಹತ್ಯೆಗೈಯ್ಯುವುದಕ್ಕೂ ಮುನ್ನ, ಅವರನ್ನು ಒತ್ತೆಯಾಳಾಗಿಸಿಕೊಂಡಿದ್ದ ಬಂಡುಕೋರರು, ಅವರೆಲ್ಲ ತಮ್ಮ ವಶದಲ್ಲಿದ್ದಾಗಲೇ ಹತ್ಯೆಗೈದಿದ್ದರು. ನಂತರ, ಅವರ ಮೃತದೇಹಗಳನ್ನು ನದಿಯೊಂದರಲ್ಲಿ ಎಸೆದು ಹೋಗಿದ್ದರು.
ಸೌಜನ್ಯ: ndtv.com