ಹರೀಶ್ ಸಾಳ್ವೆ ವಿವಾಹ ಸಮಾರಂಭದಲ್ಲಿ ಲಲಿತ್ ಮೋದಿ ಭಾಗಿ; ವಿಪಕ್ಷಗಳ ಟೀಕೆ
ಹೊಸದಿಲ್ಲಿ: ಹಿರಿಯ ವಕೀಲ ಹಾಗೂ ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಅವರು ರವಿವಾರ ತಮ್ಮ ಬ್ರಿಟಿಷ್ ಗೆಳತಿ ಟ್ರಿನಾ ಅವರನ್ನು ವಿವಾಹವಾದಾಗ ಸಮಾರಂಭದಲ್ಲಿ ರಿಲಯನ್ಸ್ ಸಂಸ್ಥೆಯ ನೀತಾ ಅಂಬಾನಿ, ಉದ್ಯಮಿ ಲಕ್ಷ್ಮಿ ಮಿತ್ತಲ್ ಮತ್ತು ರೂಪದರ್ಶಿ ಉಜ್ವಲಾ ರಾವತ್ ಸಹಿತ ಹಲವು ಖ್ಯಾತನಾಮರು ಭಾಗವಹಿಸಿದ್ದರು. ಆದರೆ ಹರೀಶ್ ಸಾಳ್ವೆಯ ಈ ಮೂರನೇ ವಿವಾಹಕ್ಕೆ ಮಾಜಿ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಕೂಡ ಆಗಮಿಸಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ ಹಾಗೂ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಲಲಿತ್ ಮೋದಿ 2010ರಲ್ಲಿ ಭಾರತ ತೊರೆದು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿರುವವರು ಸಾಳ್ವೆ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ವಿಪಕ್ಷಗಳು ಪ್ರಶ್ನಿಸಿವೆ.
ದೇಶದ ಅತ್ಯಂತ ಹಿರಿಯ ವಕೀಲರಲ್ಲೊಬ್ಬರ ಹೊರತಾಗಿ ಸಾಳ್ವೆ ಅವರು ಕೇಂದ್ರ ಸರ್ಕಾರದ ಪ್ರಸ್ತಾವಿತ “ಒಂದು ದೇಶ-ಒಂದು ಚುನಾವಣೆ” ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲೂ ಸ್ಥಾನ ಪಡೆದವರಾಗಿದ್ದಾರೆ.
ಶಿವಸೇನೆ ಸಂಸದೆ ಪ್ರಿಯಾಂಕ ಚತುರ್ವೇದಿ ಈ ಕುರಿತು ಟ್ವೀಟ್ ಮಾಡಿದ್ದು, “ ಸರ್ಕಾರಿ ಬಿಜೆಪಿ ವಕೀಲರೊಬ್ಬರು ಮೂರನೇ ಬಾರಿ ವಿವಾಹವಾಗಿದ್ದಾರೆಂದು ಹಾಗೂ ನಂತರ ಮೋದಿ ಸರ್ಕಾರದ ಪರವಾಗಿ ಸಮಾನ ವಿವಾಹ ಕಾನೂನುಗಳು, ಬಹುಪತ್ನಿತ್ವ ಮುಂತಾದ ವಿಚಾರದಲ್ಲಿ ಮಾತನಾಡುತ್ತಾರೆ ಎಂಬುದು ನನಗೆ ಪರಿವೆಯಿಲ್ಲ, ಆದರೆ ಎಲ್ಲರಿಗೂ ಕಳವಳ ಹುಟ್ಟಿಸುವ ವಿಚಾರವೆಂದರೆ ಭಾರತೀಯ ಕಾನೂನನ್ನು ತಪ್ಪಿಕೊಂಡಿರುವ ವ್ಯಕ್ತಿಯೊಬ್ಬರು ಮೋದಿ ಸರ್ಕಾರದ ಮೆಚ್ಚಿನ ವಕೀಲರ ವಿವಾಹ ಸಮಾರಂಭದ ಆಮಂತ್ರಿತರಾಗಿರುವುದು. ಯಾರು ಯಾರಿಗೆ ಸಹಾಯ ಮಾಡುತ್ತಿದ್ದಾರೆ? ಯಾರು ಯಾರನ್ನು ರಕ್ಷಿಸುತ್ತಿದ್ದಾರೆ ಎಂಬುದು ಈಗ ಪ್ರಶ್ನೆಯಾಗಿ ಉಳಿದಿಲ್ಲ,” ಎಂದು ಪ್ರಿಯಾಂಕ ಚತುರ್ವೇದಿ ಬರೆದಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಪ್ರೀತೇಶ್ ಶಾ ಟ್ವೀಟ್ ಮಾಡಿ “ನೀರವ್ ಮೋದಿ, ಲಲಿತ್ ಮೋದಿಯನ್ನು ಕಳ್ಳರೆಂದು ಹೇಳಿದ್ದಕ್ಕೆ ರಾಹುಲ್ ಗಾಂಧಿ ಅನರ್ಹಗೊಂಡರು ಮತ್ತು ಹರೀಶ್ ಸಾಳ್ವೆ ಅದನ್ನು ಸಮರ್ಥಿಸಿದರು. ಇತ್ತೀಚೆಗೆ ಮೋದಿ ಸರ್ಕಾರ “ಒಂದು ದೇಶ- ಒಂದು ಚುನಾವಣೆ” ಕುರಿತು ಉನ್ನತ ಮಟ್ಟದ ಸಮಿತಿ ರಚಿಸಿದೆ. ದೇಶದಿಂದ ಪಲಾಯನಗೈದಿರುವ ಆರೋಪಿಯೊಬ್ಬನ ಜೊತೆ ಸಂಭ್ರಮಿಸುತ್ತಿರುವ ಹರೀಶ್ ಸಾಳ್ವೆ ಈ ಸಮಿತಿಯ ಭಾಗವಾಗಿದ್ದಾರೆ,” ಎಂದಿದ್ದಾರೆ.
ಹರೀಶ್ ಸಾಳ್ವೆ ವಿವಾಹದಲ್ಲಿ ಲಲಿತ್ ಮೋದಿ ಉಪಸ್ಥಿತಿಯನ್ನು ಟೀಕಿಸಿರುವ ಆಮ್ ಆದ್ಮಿ ಪಕ್ಷ “ಇದು ಮೋದಿಯ ಘನತೆಗೆ ಒಂದು ಕಪ್ಪು ಚುಕ್ಕೆ” ಎಂದು ಹೇಳಿದೆ.
ಐಪಿಎಲ್ 2010 ನಂತರ ಆರ್ಥಿಕ ಅವ್ಯವಹಾರಗಳು ಮತ್ತು ದುರ್ನಡತೆಗಾಗಿ ಲಲಿತ್ ಮೋದಿಯನ್ನು ಬಿಸಿಸಿಐನಿಂದ ವಜಾಗೊಳಿಸಲಾಗಿತ್ತು.
ಬಿಸಿಸಿಐಗೆ ರೂ. 753 ಕೋಟಿ ವಂಚಿಸಿದ್ದಾರೆಂಬ ಆರೋಪವೂ ಲಲಿತ್ ಮೋದಿ ಮೇಲಿದೆ.
ಜಾರಿ ನಿರ್ದೇಶನಾಲಯ ಇನ್ನೇನು ಕೇಸ್ ದಾಖಲಿಸುತ್ತದೆ ಎನ್ನುವಾಗ ಜೀವಕ್ಕೆ ಅಪಾಯ ಎಂದು ಹೇಳಿಕೊಂಡು 2010ರಲ್ಲಿ ಭಾರತದಿಂದ ಪಲಾಯನಗೈದಿದ್ದರು. ಅಕ್ಟೋಬರ್ 2010ರಲ್ಲಿ ಬಿಸಿಸಿಐ ಲಲಿತ್ ಮೋದಿ ವಿರುದ್ಧ ಚೆನ್ನೈನಲ್ಲಿ ದೂರು ದಾಖಲಿಸಿದೆ.