ಲೆಬನಾನ್ ಪೇಜರ್ ಸ್ಫೋಟ: ಕೇರಳ ಯುವಕನ ಹಿನ್ನೆಲೆ ಪರೀಕ್ಷಿಸುತ್ತಿರುವ ಪೊಲೀಸರು

Update: 2024-09-22 08:07 GMT

ರಿನ್ಸನ್ ಜೋಸ್ PC: x.com/sam6

ವಯನಾಡ್: ಲೆಬನಾನ್ ನಲ್ಲಿ ನಡೆದ ಪೇಜರ್ ಸ್ಫೋಟದೊಂದಿಗೆ ನಾರ್ವೆಯಲ್ಲಿ ನೆಲೆಸಿರುವ ಕೇರಳ ನಿವಾಸಿ ರಿನ್ಸನ್ ಜೋಸ್ ಹೆಸರು ತಳುಕು ಹಾಕಿಕೊಂಡಿರುವ ಕುರಿತು ತನಿಖೆ ನಡೆಯುತ್ತಿದೆ ಎಂಬ ವರದಿಗಳ ನಡುವೆಯೆ, ಸದರಿ ಯುವಕನ ಕುಟುಂಬದ ಹಿನ್ನೆಲೆಯ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ರವಿವಾರ ಪೊಲೀಸರು ದೃಢಪಡಿಸಿದ್ದಾರೆ. ಈ ನಡುವೆ, ಸದರಿ ಯುವಕ ನಮ್ಮ ದೇಶದ ಪುತ್ರನಾಗಿದ್ದು, ಆತನಿಗೆ ರಕ್ಷಣೆ ಒದಗಿಸಬೇಕು ಎಂದು ಬಿಜೆಪಿ ನಾಯಕರೊಬ್ಬರು ಆಗ್ರಹಿಸಿದ್ದಾರೆ.

“ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಅಥವಾ ತನಿಖೆ ನಡೆಯುತ್ತಿಲ್ಲ. ನಮ್ಮ ವಿಶೇಷ ಘಟಕದ ಅಧಿಕಾರಿಗಳು ಹಿನ್ನೆಲೆಯ ಕುರಿತು ಪರಿಶೀಲನೆ ನಡೆಸಿದ್ದಾರೆ. ಇದರಲ್ಲೇನೂ ಹೊಸತೇನೂ ಇಲ್ಲ. ಇಂತಹ ವರದಿಗಳು ಕಂಡು ಬಂದಾಗ, ಪರಿಶೀಲನೆ ನಡೆಸುವುದು ಸಾಮಾನ್ಯ ಸಂಗತಿಯಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ವರದಿಗಳ ಬೆನ್ನಿಗೇ, ಯುವಕನ ಕುಟುಂಬವು ವಾಸಿಸುತ್ತಿರುವ ಮನಂತವಾಡಿ ಬಳಿಯಿರುವ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಗಸ್ತನ್ನು ಪ್ರಾರಂಭಿಸಲಾಗಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಯುವಕನ ಕುಟುಂಬದ ಸದಸ್ಯರು ಯಾವುದೇ ಪೊಲೀಸ್ ಭದ್ರತೆಗೆ ಮನವಿ ಮಾಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ದಶಕದ ಹಿಂದೆ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದ ರಿನ್ಸನ್, ಇದೀಗ ನಾರ್ವೆ ಪ್ರಜೆಯಾಗಿದ್ದಾರೆ.

ಈ ನಡುವೆ, ರಿನ್ಸನ್ ಹಾಗೂ ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಬಿಜೆಪಿ ನಾಯಕ ಸಂದೀಪ್ ಜಿ ವಾರಿಯರ್ ಆಗ್ರಹಿಸಿದ್ದಾರೆ.

ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ವಾರಿಯರ್, “ಆತ ನಮ್ಮ ದೇಶದ ಪುತ್ರನಾಗಿದ್ದಾನೆ. ಆತ ಮಲಯಾಳಿ ಆಗಿದ್ದಾನೆ. ನಾವು ರಿನ್ಸನ್ ಹಾಗೂ ಆತನ ಕುಟುಂಬಕ್ಕೆ ರಕ್ಷಣೆ ಒದಗಿಸಲೇಬೇಕಿದೆ” ಎಂದು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News