ಬಿಹಾರ | ಸೇತುವೆಯ ಗಿರ್ಡರ್ ಮಟ್ಟಕ್ಕೆ ಏರಿಕೆಯಾದ ಪ್ರವಾಹದ ನೀರು: ಹಲವು ರೈಲುಗಳು ರದ್ದು

Update: 2024-09-22 07:34 GMT

Photo: PTI

ಪಾಟ್ನಾ: ರವಿವಾರ ಬಿಹಾರದ ಭಗಲ್ ಪುರ್ ನಲ್ಲಿ ಪ್ರವಾಹದ ನೀರು ಸೇತುವೆಯೊಂದರ ಗಿರ್ಡರ್ ಮಟ್ಟಕ್ಕೆ ಏರಿಕೆಯಾಗಿದ್ದರಿಂದ, ಹಲವು ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಮತ್ತಷ್ಟು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಪೂರ್ವ ಕೇಂದ್ರ ರೈಲ್ವೆ ವಲಯ, 195ನೇ ಸೇತುವೆಯ ಗಿರ್ಡರ್ ಮಟ್ಟಕ್ಕೆ ಪ್ರವಾಹದ ನೀರು ಏರಿಕೆಯಾಗಿರುವುದರಿಂದ, ಸುಲ್ತಾನ್ ಗಂಜ್ ಮತ್ತು ರತನ್ ಪುರ್ ನಿಲ್ದಾಣಗಳ ನಡುವಿನ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಜಮಲ್ಪುರ್-ಭಗಲ್ಪುರ್ ವಲಯದ ಮೂಲಕ ಹಾದು ಹೋಗುವ ಮತ್ತಷ್ಟು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಹೇಳಿದೆ.

“ಶನಿವಾರ ರಾತ್ರಿ 11.45ಕ್ಕೆ ಪ್ರವಾಹದ ನೀರು ಗಿರ್ಡರ್ ಮಟ್ಟಕ್ಕೆ ತಲುಪಿದೆ. ಇದರೊಂದಿಗೆ, ಜಮಲ್ಪುರ್-ಭಗಲ್ಪುರ್ ವಲಯದ ಹಲವಾರು ಸ್ಥಳಗಳಲ್ಲಿ ಹಲವಾರು ನದಿಗಳ ನೀರು ಅಪಾಯಕಾರಿ ಮಟ್ಟವನ್ನು ಮೀರಿ ಹರಿಯುತ್ತಿವೆ” ಎಂದೂ ಹೇಳಿದೆ.

ರದ್ದುಗೊಂಡಿರುವ ರೈಲುಗಳ ಪೈಕಿ ಪಾಟ್ನಾ-ಡುಮ್ಕಾ ಎಕ್ಸ್ ಪ್ರೆಸ್, ಸರಾಯಿಗಢ್-ಡಿಯೋಗಢ್ ಸ್ಪೆಷಲ್, ಜಮಲ್ಪುರ್-ಕಿಯುಲ್ ಮೆಮು ಸ್ಪೆಷಲ್ ಹಾಗೂ ಭಗಲ್ಪುರ್-ದಾನಾಪುರ್ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲುಗಳು ಸೇರಿವೆ ಎಂದು ತಿಳಿಸಿದೆ.

ಮಾರ್ಗ ಬದಲಾವಣೆಗೊಂಡಿರುವ ರೈಲುಗಳ ಪೈಕಿ ಅಜ್ಮೇರ್-ಭಗಲ್ಪುರ್ ಎಕ್ಸ್ ಪ್ರೆಸ್, ವಿಕ್ರಮ್ ಶೀಲ ಎಕ್ಸ್ ಪ್ರೆಸ್, ಹೌರಾ-ಗಯಾ ಎಕ್ಸ್ ಪ್ರೆಸ್, ಸೂರತ್-ಭಗಲ್ಪುರ್ ಎಸ್ಎಫ್ ಎಕ್ಸ್ ಪ್ರೆಸ್, ಆನಂದ್ ವಿಹಾರ್-ಮಾಲ್ಡಾ ಟೌನ್ ಎಕ್ಸ್ ಪ್ರೆಸ್ ಹಾಗೂ ಬ್ರಹ್ಮಪುತ್ರ ಮೇಲ್ ರೈಲುಗಳು ಸೇರಿವೆ.

ಕನಿಷ್ಠ ಪಕ್ಷ ನಾಲ್ಕು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ನಡುವೆ, ಮುಝಾಫ್ಫರ್ ಪುರ್ ಜಂಕ್ಷನ್ ಯಾರ್ಡ್ ನಲ್ಲಿ ರೈಲಿನ ಇಂಜಿನ್ ಒಂದು ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News