ಏರ್ ಮಾರ್ಶಲ್ ಎ.ಪಿ. ಸಿಂಗ್ ವಾಯುಪಡೆಯ ಮುಂದಿನ ಮುಖ್ಯಸ್ಥ

Update: 2024-09-21 15:32 GMT

ಏರ್ ಮಾರ್ಶಲ್ ಎ.ಪಿ. ಸಿಂಗ್ | PC : PTI

ಹೊಸದಿಲ್ಲಿ : ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಏರ್ ಮಾರ್ಶಲ್ ಅಮರ್ ಪ್ರೀತ್ ಸಿಂಗ್ ಸೆಪ್ಟಂಬರ್ 30ರಂದು ಅಧಿಕಾರ ವಹಿಸಿಕೊಳ್ಳುವರು ಎಂದು ಕೇಂದ್ರ ಸರಕಾರ ಶನಿವಾರ ಪ್ರಕಟಿಸಿದೆ.

59 ವರ್ಷದ ಸಿಂಗ್ ಏರ್ ಚೀಫ್ ಮಾರ್ಶಲ್ ವಿ.ಆರ್. ಚೌಧರಿ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚೌಧರಿ ಮೂರು ವರ್ಷಗಳ ಕಾಲ ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗುತ್ತಿದ್ದಾರೆ.

ಸಿಂಗ್ ತೇಜಸ್ ಹಗುರ ಯುದ್ಧ ವಿಮಾನ (ಎಲ್‌ಸಿಎ) ಕಾರ್ಯಕ್ರಮದೊಂದಿಗೆ ನಿಕಟ ಒಡನಾಟ ಹೊಂದಿದ್ದಾರೆ. ಹಗುರ ಯುದ್ಧ ವಿಮಾನದ ನೂತನ ಮಾದರಿಗಳು ಮುಂದಿನ ದಶಕ ಮತ್ತು ಅದರ ಬಳಿಕವೂ ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯದ ಮಹತ್ವದ ಭಾಗವಾಗಿರುತ್ತದೆ.

ಭಾರತೀಯ ವಾಯುಪಡೆಯು ಸ್ಥಳೀಯವಾಗಿ ಉತ್ಪಾದಿಸಲಾದ ಸೇನಾ ಸಲಕರಣೆಗಳ ಮೂಲಕ ತನ್ನ ಸಾಮರ್ಥ್ಯಗಳನ್ನು ಆಕ್ರಮಣಕಾರಿಯಾಗಿ ಆಧುನೀಕರಿಸುತ್ತಿರುವ ಹೊತ್ತಿನಲ್ಲಿ, ಜಗತ್ತಿನ ನಾಲ್ಕನೇ ಅತಿ ದೊಡ್ಡ ವಾಯುಪಡೆಯ ಮುಖ್ಯಸ್ಥರಾಗಿ ಸಿಂಗ್ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.

ಯುದ್ಧವಿಮಾನದ ಪೈಲಟ್ ಆಗಿ 5,000ಕ್ಕೂ ಅಧಿಕ ಗಂಟೆಗಳ ಹಾರಾಟ ಅನುಭವ ಹೊಂದಿರುವ ಸಿಂಗ್, ಪ್ರಸಕ್ತ ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥರಾಗಿದ್ದಾರೆ. ಅವರು 1984 ಡಿಸೆಂಬರ್‌ನಲ್ಲಿ ವಾಯುಪಡೆಗೆ ಸೇರ್ಪಡೆಗೊಂಡಿದ್ದರು. ತನ್ನ 40 ವರ್ಷಗಳ ಸುದೀರ್ಘ ಸೇವೆಯಲ್ಲಿ ಅವರು ವಿವಿಧ ಕಮಾಂಡ್‌ಗಳಲ್ಲಿ ವಿವಿಧ ಪಾತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News