ಕೋಲ್ಕತಾ ವೈದ್ಯೆಯ ಅತ್ಯಾಚಾರ- ಕೊಲೆ | ಸಿಬಿಐಯಿಂದ ಇನ್ನೋರ್ವ ವೈದ್ಯನ ವಿಚಾರಣೆ
ಕೋಲ್ಕತ : ಇಲ್ಲಿನ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಲಿಕಾ ವೈದ್ಯೆಯೊಬ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಶನಿವಾರ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್‌ರ ಆಪ್ತ ಎನ್ನಲಾದ ಇನ್ನೋರ್ವ ವೈದ್ಯರನ್ನು ವಿಚಾರಣೆಗೆ ಒಳಪಡಿಸಿದೆ.
ಸಿಬಿಐ ಅಧಿಕಾರಿಗಳು ಕೋಲ್ಕತದ ಸಾಲ್ಟ್ ಲೇಕ್ ಪ್ರದೇಶದ ಸಿಜಿಒ ಕಾಂಪ್ಲೆಕ್ಸ್ ನಲ್ಲಿರುವ ಸಿಬಿಐ ಕಚೇರಿಯಲ್ಲಿ ಡಾ. ಬಿರೂಪಾಕ್ಷ ಬಿಸ್ವಾಸ್‌ರನ್ನು ವಿಚಾರಣೆಗೆ ಒಳಪಡಿಸಿದರು. ಬಿಸ್ವಾಸ್‌ರನ್ನು ಇತ್ತೀಚೆಗೆ ಪಶ್ಚಿಮ ಬಂಗಾಳ ಸರಕಾರವು ಬರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ದಕ್ಷಿಣ 24 ಪರಗಣಗಳ ಜಿಲ್ಲೆಯಲ್ಲಿರುವ ಕಕ್‌ದ್ವಿಪ್ ಆಸ್ಪತ್ರೆಗೆ ವರ್ಗಾಯಿಸಿತ್ತು.
ಸಂತ್ರಸ್ತ ವೈದ್ಯೆಯನ್ನು ಆಗಸ್ಟ್ 9ರ ಮುಂಜಾನೆ ಆರ್‌ಜಿಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರಗೈದು ಕೊಲೆಗೈಯಲಾಗಿತ್ತು.
‘‘ಆಗಸ್ಟ್ 9ರಂದು ಡಾ. ಬಿಸ್ವಾಸ್‌ಗೆ ಯಾವುದೇ ಕೆಲಸವಿಲ್ಲದಿದ್ದರೂ, ಅವರು ಯಾಕೆ ಆರ್‌ಜಿ ಕರ್ ಆಸ್ಪತ್ರೆಯಲ್ಲಿದ್ದರು ಎನ್ನುವುದನ್ನು ತಿಳಿಯಲು ಅವರನ್ನು ಪ್ರಶ್ನಿಸಲಾಗುತ್ತಿದೆ’’ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದರು.
‘‘ಅದೂ ಅಲ್ಲದೆ, ಬಿಸ್ವಾಸ್ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಥಾಕಥಿತ ಉತ್ತರ ಬಂಗಾಳ ಲಾಬಿಯ ಭಾಗವಾಗಿದ್ದಾರೆ’’ ಎಂದು ಅವರು ಹೇಳಿದರು.
‘ನಾರ್ತ್ ಬೆಂಗಾಲ್ ಲಾಬಿ’ ಎನ್ನುವುದು ವೈದ್ಯರು ಮತ್ತು ಅಧಿಕಾರಿಗಳ ಒಂದು ಗುಂಪಾಗಿದ್ದು, ಅವರು ರಾಜ್ಯದ ಸರಕಾರಿ ಒಡೆತನದ ವೈದ್ಯಕೀಯ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
► ಸಾವಿರಾರು ಜನರಿಂದ 42 ಕಿ.ಮೀ. ಉದ್ದದ ಪಂಜಿನ ಮೆರವಣಿಗೆ
ಕಳೆದ ತಿಂಗಳು ಅತ್ಯಾಚಾರ ಮತ್ತು ಕೊಲೆಗೀಡಾಗಿರುವ ಕೋಲ್ಕತದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಲಿಕಾ ವೈದ್ಯೆಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಸಾವಿರಾರು ಮಂದಿ ಶುಕ್ರವಾರ ರಾತ್ರಿ ಸರದಿ ಪಂಜಿನ ಮೆರವಣಿಗೆ ನಡೆಸಿದರು. ಜನರು ಕೋಲ್ಕತದ ಹೈಲ್ಯಾಂಡ್ ಪಾರ್ಕ್‌ನಿಂದ ಶ್ಯಾಮ್‌ಬಝಾರ್ ಕ್ರಾಸಿಂಗ್‌ವರೆಗೆ ಸುಮಾರು 42 ಕಿ.ಮೀ. ಅಂತರದ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಸರದಿ ಪಂಜಿನ ಮೆರವಣಿಗೆಯು ಸಂಜೆ 4 ಗಂಟೆಗೆ ಆರಂಭಗೊಂಡು ಮಧ್ಯರಾತ್ರಿಯ ಸುಮಾರಿಗೆ ಮುಕ್ತಾಯಗೊಂಡಿತು. ವೈದ್ಯರು, ಸ್ವಯಂಸೇವಕ ಸಂಸ್ಥೆಗಳ ಸದಸ್ಯರು, ವಿಶೇಷ ಚೇತನ ಜನರ ಸಂಘಟನೆಗಳ ಸದಸ್ಯರು, ವ್ಯಂಗ್ಯಚಿತ್ರಕಾರರು, ಮಾಹಿತಿ ತಂತ್ರಜ್ಞಾನ ಕೆಲಸಗಾರರು, ವಿಜ್ಞಾನಿಗಳು ಮತ್ತು ಪ್ರೊಫೆಸರ್‌ಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ಫುಟ್ಬಾಲ್ ಕ್ಲಬ್‌ಗಳಾದ ಮೋಹನ್ ಬಾಗನ್ ಮತ್ತು ಈಸ್ಟ್ ಬೆಂಗಾಲ್‌ಗಳ ಸದಸ್ಯರೂ ಮೆರವಣಿಗೆಯಲ್ಲಿ ಭಾಗವಹಿಸಿದರು.