ಮಾಧವಿ ಪುರಿ ಬುಚ್ ಹಿತಾಸಕ್ತಿ ಸಂಘರ್ಷದ ಪ್ರಕರಣಗಳಿಂದ ಹಿಂದೆ ಸರಿದಿದ್ದರೇ?

Update: 2024-09-21 15:22 GMT

ಮಾಧವಿ ಪುರಿ ಬುಚ್ | PTI 

ಹೊಸದಿಲ್ಲಿ : ಸಂಭಾವ್ಯ ಹಿತಾಸಕ್ತಿ ಸಂಘರ್ಷದ ಕಾರಣಕ್ಕಾಗಿ ಭಾರತೀಯ ಶೇರು ವಿನಿಮಯ ಮಂಡಳಿ (ಸೆಬಿ)ಯ ಅಧ್ಯಕ್ಷೆ ಮಾಧವಿ ಪುರಿ ಬುಚ್ ಹಿಂದಕ್ಕೆ ಸರಿದಿರುವ ಪ್ರಕರಣಗಳ ಮಾಹಿತಿ ತಕ್ಷಣಕ್ಕೆ ಲಭ್ಯವಿಲ್ಲ ಎಂದು ಮಾಹಿತಿಹಕ್ಕು ಕಾಯ್ದೆಯಡಿ ಕೇಳಲಾಗಿರುವ ಪ್ರಶ್ನೆಯೊಂದಕ್ಕೆ ನೀಡಿರುವ ಉತ್ತರದಲ್ಲಿ ಸೆಬಿ ಶುಕ್ರವಾರ ಹೇಳಿದೆ. ಅದೂ ಅಲ್ಲದೆ, ಆ ಮಾಹಿತಿಯನ್ನು ಸಿದ್ಧಪಡಿಸಲು ತನ್ನ ಸಂಪನ್ಮೂಲಗಳನ್ನು ‘‘ಅನುಪಾತ ಮೀರಿ’’ದ ಪ್ರಮಾಣದಲ್ಲಿ ಬೇರೆಡೆಗೆ ತಿರುಗಿಸಬೇಕಾಗುತ್ತದೆ ಎಂಬುದಾಗಿಯೂ ಅದು ತಿಳಿಸಿದೆ.

ತಾನು ಮತ್ತು ತನ್ನ ಕುಟುಂಬ ಸದಸ್ಯರು ಹೊಂದಿರುವ ಆರ್ಥಿಕ ಸೊತ್ತುಗಳು ಮತ್ತು ಶೇರುಗಳ ಬಗ್ಗೆ ಸರಕಾರ ಮತ್ತು ಸೆಬಿ ಮಂಡಳಿಗೆ ನೀಡಿರುವ ಘೋಷಣಾ ಪತ್ರಗಳ ಪ್ರತಿಗಳನ್ನು ನೀಡಲೂ ಭಾರತೀಯ ಶೇರು ಮಾರುಕಟ್ಟೆಗಳ ನಿಯಂತ್ರಣ ಸಂಸ್ಥೆ ನಿರಾಕರಿಸಿದೆ. ತನ್ನ ನಿರಾಕರಣೆಗೆ ಕಾರಣಗಳನ್ನು ನೀಡಿರುವ ಸೆಬಿ, ಇವುಗಳು ‘‘ವೈಯಕ್ತಿಕ ಮಾಹಿತಿ’’ಗಳಾಗಿವೆ ಮತ್ತು ಅವುಗಳನ್ನು ಬಹಿರಂಗಪಡಿಸುವುದು ಸಂಬಂಧಪಟ್ಟವರ ವೈಯಕ್ತಿಕ ಭದ್ರತೆಯನ್ನು ಅಪಾಯಕ್ಕೆ ದೂಡಬಹುದು ಎಂಬುದಾಗಿಯೂ ಅದು ಹೇಳಿಕೊಂಡಿದೆ.

ಆಸ್ತಿಗಳ ಘೋಷಣೆ ಮಾಡಿರುವ ದಿನಾಂಕಗಳನ್ನು ಬಹಿರಂಗಪಡಿಸಲೂ ಅದು ನಿರಾಕರಿಸಿದೆ.

ಸಂಭಾವ್ಯ ಹಿತಾಸಕ್ತಿ ಸಂಘರ್ಷವನ್ನು ಒಳಗೊಂಡ ಪ್ರಕರಣಗಳಿಂದ ಅಧ್ಯಕ್ಷರು ಹಿಂದೆ ಸರಿದಿದ್ದಾರೆ ಎಂದು ಆಗಸ್ಟ್ 11ರಂದು ಸೆಬಿ ನೀಡಿರುವ ಪತ್ರಿಕಾ ಹೇಳಿಕೆಯೊಂದು ಹೇಳಿಕೊಂಡಿತ್ತು.

‘‘ಶೇರುಗಳ ಮಾಲೀಕತ್ವ ಮತ್ತು ಅವುಗಳ ವರ್ಗಾವಣೆಗೆ ಸಂಬಂಧಿಸಿದ ಘೋಷಣೆಗಳನ್ನು ಸೆಬಿ ಅಧ್ಯಕ್ಷರು ಕಾಲ ಕಾಲಕ್ಕೆ ಮಾಡಿದ್ದಾರೆ ಎನ್ನುವುದು ಗಮನಕ್ಕೆ ಬಂದಿದೆ’’ ಎಂದು ಅದು ಹೇಳಿತ್ತು.

ಸೆಬಿ ಅಧಕ್ಷೆ ಮಾಧವಿ ಪುರಿ ಬುಚ್ ಅದಾನಿ ಸಮೂಹದ ವಿದೇಶಿ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ಈ ಕಾರಣಕ್ಕಾಗಿ ಅದಾನಿ ಸಮೂಹ ನಡೆಸಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಸೆಬಿ ಉತ್ಸುಕವಾಗಿಲ್ಲ ಎಂದು ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡನ್‌ಬರ್ಗ್ ರಿಸರ್ಚ್ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News