ಮಹಾರಾಷ್ಟ್ರ ವಿಧಾನಸಭಾ ಚುನಾವಣೆ | ಓರ್ವ ತೃತೀಯಲಿಂಗಿ ಸೇರಿದಂತೆ 11 ವಿಬಿಎ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
ಮುಂಬೈ : ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ ಬಹುಜನ ಅಘಾಡಿ (ವಿಬಿಎ) ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಓರ್ವ ತೃತೀಯಲಿಂಗಿ ಸೇರಿದಂತೆ 11 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ ಅಂಬೇಡ್ಕರ್, ಉತ್ತರ ಮಹಾರಾಷ್ಟ್ರದ ಜಳಗಾಂವ್ ಜಿಲ್ಲೆಯ ರೇವರ್ ವಿಧಾನಸಭಾ ಕ್ಷೇತ್ರದಲ್ಲಿ ಲೇವಾ ಪಾಟೀಲ್ ಸಮುದಾಯಕ್ಕೆ ಸೇರಿದ ತೃತೀಯಲಿಂಗಿ ಶಮಿಭಾ ಪಾಟೀಲ್ ಅವರು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.
ವಿಬಿಎ ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ಭಾರತ ಆದಿವಾಸಿ ಪಾರ್ಟಿ(ಬಿಎಪಿ) ಮತ್ತು ಗೊಂಡವಾನ ಗಣತಂತ್ರ ಪಾರ್ಟಿ(ಜಿಜಿಪಿ)ಯಿಂದ ಇಬ್ಬರು ಅಭ್ಯರ್ಥಿಗಳನ್ನೂ ಅವರು ಪ್ರಕಟಿಸಿದರು.
‘‘ನಮ್ಮ ಪವಿತ್ರ ಸಿದ್ಧಾಂತಕ್ಕೆ ಬದ್ಧರಾಗಿ,ನಿಜವಾದ ಪ್ರಾತಿನಿಧ್ಯ ಮತ್ತು ರಾಜಕೀಯ ಅಧಿಕಾರವನ್ನು ಪಡೆಯುವ ಹಾಗೂ ಕೆಲವು ಜಾತಿಗಳ ಕುಟುಂಬಗಳ ಪ್ರಾಬಲ್ಯವನ್ನು ಮುರಿಯುವ ಉದ್ದೇಶದಿಂದ ನಾವು ವಂಚಿತ,‘ಬಹುಜನ ’ಗುಂಪುಗಳಿಗೆ ಪ್ರಾತಿನಿಧ್ಯ ನೀಡಿದ್ದೇವೆ ’’ ಎಂದು ಹೇಳಿದ ಅಂಬೇಡ್ಕರ್, ‘ಮುಖ್ಯವಾಹಿನಿಯ ಪಕ್ಷಗಳು ಮತ್ತು ಅವುಗಳ ಸರಕಾರಗಳಿಂದ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹೊರಗಿರಿಸಲ್ಪಟ್ಟ ವಿವಿಧ ಸಾಮಾಜಿಕ ಸಮುದಾಯಗಳ ಅರ್ಭ್ಯಥಿಗಳನ್ನು ನಮ್ಮ ಪಕ್ಷವು ಹೆಸರಿಸಿದೆ ’ ಎಂದು ತಿಳಿಸಿದರು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನವಂಬರ್ ನಲ್ಲಿ ನಡೆಯುವ ಸಾಧ್ಯತೆಯಿದೆ.