ಪೇಜರ್ ಸ್ಫೋಟ ಪ್ರಕರಣಕ್ಕೆ ಮಲಯಾಳಿ ನಂಟು? ತನಿಖೆ ಹೇಳಿದ್ದೇನು?

Update: 2024-09-21 16:02 GMT

ರಿನ್ಸನ್ ಜೋಸ್ PC: x.com/sam6

ಹೊಸದಿಲ್ಲಿ: ಲೆಬನಾನ್‌ನಲ್ಲಿ ಹಿಜ್ಬುಲ್ಲಾಗಳನ್ನು ಗುರಿಯಾಗಿಸಿಕೊಂಡು ನಡೆದ ಪೇಜರ್ ಸ್ಫೋಟಗಳ ತನಿಖೆಯಲ್ಲಿ ನಾರ್ವೆಗೆ ತೆರಳಿದ್ದ ಭಾರತೀಯ ವಲಸಿಗನೋರ್ವನ ಹೆಸರು ಕೇಳಿಬಂದಿದೆ. ಈ ಸ್ಫೋಟಗಳಲ್ಲಿ 12 ಜನರು ಮೃತಪಟ್ಟು,ಸಾವಿರಾರು ಜನರು ಗಾಯಗೊಂಡಿದ್ದರು.

ಈಗ ನಾರ್ವೆಯ ಪ್ರಜೆಯಾಗಿರುವ ರಿನ್ಸನ್ ಜೋಸ್ ಕೇರಳದ ವಯನಾಡಿನಿಂದ ಅಲ್ಲಿಗೆ ವಲಸೆ ಹೋಗಿದ್ದರು. 37ರ ಹರೆಯದ ಜೋಸ್ ಒಡೆತನದ ಬಲ್ಗೇರಿಯಾದಲ್ಲಿನ ಕಂಪನಿಯು ಉಗ್ರಗಾಮಿ ಗುಂಪಿಗೆ ಪೇಜರ್‌ಗಳ ಪೂರೈಕೆಯಲ್ಲಿ ಭಾಗಿಯಾಗಿತ್ತು ಎಂದು ಆರಂಭಿಕ ವರದಿಗಳು ಸೂಚಿಸಿದ್ದವು.

ಪ್ರತಿ ಸಾಧನದಲ್ಲಿ ಮೂರು ಗ್ರಾಂ ಸ್ಫೋಟಕವನ್ನು ಬಚ್ಚಿಡಲು ಮೊಸಾದ್ (ಇಸ್ರೇಲ್ ಗುಪ್ತಚರ ಸಂಸ್ಥೆ) ಮಾರ್ಪಡಿಸಿತ್ತು ಎನ್ನಲಾದ ಪೇಜರ್‌ಗಳನ್ನು ತೈವಾನ್ ಮೂಲದ ಗೋಲ್ಡ್ ಅಪೊಲೊ ಕಂಪನಿಯು ತಯಾರಿಸಿತ್ತು ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಗೊಳಿಸಿದ್ದವು. ಆದರೆ ಕಂಪನಿಯು ಹೇಳಿಕೆಯಲ್ಲಿ,ಸ್ಫೋಟದಲ್ಲಿ ಬಳಕೆಯಾಗಿದ್ದ ಎಆರ್-924 ಪೇಜರ್ ಮಾಡೆಲ್‌ನ್ನು ವಾಸ್ತವದಲ್ಲಿ ತನ್ನ ಟ್ರೇಡ್‌ಮಾರ್ಕ್ ಬಳಸಲು ಅನುಮತಿ ಹೊಂದಿರುವ ಹಂಗರಿಯ ಬುಡಾಪೆಸ್ಟ್‌ನ ಬಿಎಸಿ ಕನ್ಸಲ್ಟಿಂಗ್ ಕೆಎಫ್‌ಟಿಯು ತಯಾರಿಸಿತ್ತು ಮತ್ತು ಮಾರಾಟ ಮಾಡಿತ್ತು ಎಂದು ತಿಳಿಸಿತ್ತು.

Full View

ಪೇಜರ್ ಸ್ಫೋಟಗಳು ಸಂಭವಿಸಿ ಎರಡು ದಿನಗಳ ಬಳಿಕ ಗುರುವಾರ ಬಲ್ಗೇರಿಯಾದ ಸರಕಾರಿ ಭದ್ರತಾ ಸಂಸ್ಥೆ ಡಿಎಎನ್‌ಎಸ್, ತಾನು ದೇಶದ ಆಂತರಿಕ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸುತ್ತಿದ್ದೇನೆ ಮತ್ತು ನೊರ್ಟಾ ಗ್ಲೋಬಲ್ ಲಿ. ಎಂದು ಬಳಿಕ ಬಹಿರಂಗಗೊಂಡಿರುವ ಕಂಪನಿಯ ಪಾತ್ರದ ಕುರಿತು ತನಿಖೆ ನಡೆಸುತ್ತಿದ್ದೇನೆ ಎಂದು ತಿಳಿಸಿತ್ತು. 2022ರಲ್ಲಿ ಸೋಫಿಯಾದಲ್ಲಿ ನೋಂದಣಿಗೊಂಡಿದ್ದ ನೊರ್ಟಾ ಗ್ಲೋಬಲ್ ಲಿ. ನಾರ್ವೆ ಪ್ರಜೆ ರಿನ್ಸನ್ ಜೋಸ್ ಒಡೆತನದ್ದಾಗಿದೆ ಎನ್ನುವುದು ಬೆಳಕಿಗೆ ಬಂದಿದೆ.

ಮರುದಿನ, ಅಂದರೆ ಶುಕ್ರವಾರ ಇನ್ನೊಂದು ಹೇಳಿಕೆ ಹೊರಡಿಸಿದ ಡಿಎಎನ್‌ಎಸ್, ಪರಿಶೀಲನೆಗಳ ಬಳಿಕ ಲೆಬನಾನ್ ಸ್ಫೋಟಗಳಲ್ಲಿ ಬಳಕೆಯಾದ ಪೇಜರ್‌ಗಳು ಬಲ್ಗೇರಿಯಾದಲ್ಲಿ ಆಮದಾಗಿರಲಿಲ್ಲ, ಅಲ್ಲಿಂದ ರಫ್ತು ಮಾಡಲಾಗಿರಲಿಲ್ಲ ಅಥವಾ ಅಲ್ಲಿ ತಯಾರಾಗಿರಲಿಲ್ಲ ಎನ್ನುವುದು ನಿರ್ವಿವಾದವಾಗಿ ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದೆ.

ಕಂಪನಿ ಮತ್ತು ಅದರ ಮಾಲಿಕರು, ಪೇಜರ್‌ನ ಮಾರಾಟ ಅಥವಾ ಖರೀದಿಗೆ ಸಂಬಂಧಿಸಿದ ಅಥವಾ ಭಯೋತ್ಪಾದನೆಗೆ ಹಣಕಾಸು ನೆರವು ಕಾನೂನುಗಳಡಿ ಯಾವುದೇ ವಹಿವಾಟುಗಳನ್ನು ನಡೆಸಿಲ್ಲ ಎಂದೂ ಅದು ತಿಳಿಸಿದೆ.

ಈ ನಡುವೆ, ಹೊರಬಿದ್ದಿರುವ ಮಾಹಿತಿಯ ಕುರಿತು ತಾವು ತನಿಖೆಯನ್ನು ಆರಂಭಿಸಿದ್ದೇವೆ ಎಂದು ನಾರ್ವೆ ಪೋಲಿಸರು ತಿಳಿಸಿದ್ದಾರೆ.

ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಜೋಸ್ ಕೆಲವು ವರ್ಷಗಳ ಹಿಂದೆ ಉನ್ನತ ಶಿಕ್ಷಣಕ್ಕಾಗಿ ನಾರ್ವೆಗೆ ತೆರಳಿದ್ದರು. ಶಿಕ್ಷಣದ ಬಳಿಕ ಕೆಲಕಾಲ ಲಂಡನ್‌ನಲ್ಲಿ ಕೆಲಸ ಮಾಡಿದ್ದ ಅವರು ಬಳಿಕ ನಾರ್ವೆಗೆ ಮರಳಿದ್ದರು.

ಜೋಸ್ ಲಿಂಕ್ಡ್‌ಇನ್ ಪೇಜ್ ಪ್ರಕಾರ, ಅವರು ನಾರ್ವೆಯ ಪತ್ರಿಕಾ ಸಮೂಹ ಡಿಎನ್ ಮೀಡಿಯಾದಲ್ಲಿ ಡಿಜಿಟಲ್ ಕಸ್ಟಮರ್ ಸಪೋರ್ಟ್ ವಿಭಾಗದಲ್ಲಿ ಸುಮಾರು ಐದು ವರ್ಷಗಳಿಂದ ಕೆಲಸ ಮಾಡಿದ್ದಾರೆ. ಮಂಗಳವಾರದಿಂದ ಜೋಸ್ ವಿದೇಶ ಪ್ರಯಾಣದಲ್ಲಿದ್ದಾರೆ ಮತ್ತು ಅವರನ್ನು ಸಂಪರ್ಕಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಡಿಎನ್ ಮೀಡಿಯಾ ತಿಳಿಸಿದ್ದಾಗಿ ವರ್ಡನ್ಸ್ ಗ್ಯಾಂಗ್ ದೈನಿಕವು ವರದಿ ಮಾಡಿದೆ.

‘ಜೋಸ್ ತನ್ನ ಪತ್ನಿಯೊಂದಿಗೆ ಒಸ್ಲೋದಲ್ಲಿ ನೆಲೆಸಿದ್ದಾರೆ ಮತ್ತು ಅವರ ಅವಳಿ ಸೋದರ ಲಂಡನ್‌ನಲ್ಲಿದ್ದಾರೆ. ನಾವು ಪ್ರತಿದಿನ ಫೋನ್‌ನಲ್ಲಿ ಮಾತನಾಡುತ್ತೇವೆ. ಆದರೆ ಕಳೆದ ಮೂರು ದಿನಗಳಿಂದ ನಾವು ಜೋಸ್ ಸಂಪರ್ಕದಲ್ಲಿಲ್ಲ. ಅವರು ನೇರ ನಡೆಯ ವ್ಯಕ್ತಿಯಾಗಿದ್ದು, ನಮಗೆ ಅವರಲ್ಲಿ ಸಂಪೂರ್ಣ ನಂಬಿಕೆಯಿದೆ. ಅವರು ಯಾವುದೇ ತಪ್ಪಿನಲ್ಲಿ ಭಾಗಿಯಾಗುವವರಲ್ಲ, ಈ ಸ್ಫೋಟಗಳಲ್ಲಿ ಅವರನ್ನು ಸಿಲುಕಿಸಿರಬಹುದು’ ಎಂದು ಅವರ ಸಂಬಂಧಿ ತಂಗಚ್ಚನ್ ಶುಕ್ರವಾರ ಸುದ್ದಿಸಂಸ್ಥೆಗೆ ತಿಳಿಸಿದರು. ಜೋಸ್ ಪತ್ನಿಯನ್ನು ಸಂಪರ್ಕಿಸಲೂ ತಮಗೆ ಸಾಧ್ಯವಾಗಿಲ್ಲ ಎಂದರು.

ಜೋಸ್ ಸ್ಥಾಪಿಸಿದ ನೊರ್ಟಾ ಗ್ಲೋಬಲ್ ಕಳೆದ ವರ್ಷ ಐರೋಪ್ಯ ಒಕ್ಕೂಟದಿಂದ ಹೊರಗೆ ಸಲಹಾ ಚಟುವಟಿಕೆಗಳ ಮೂಲಕ 7,25,000 ಡಾ.(ಅಂದಾಜು ಆರು ಕೋ. ರೂ.ಗಳ ಆದಾಯವನ್ನು ಘೋಷಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News