300 ವರ್ಷಗಳ ಹಿಂದೆ ಮೃತಪಟ್ಟ ಔರಂಗಜೇಬ್ ಸಮಾಧಿ ಸುತ್ತ ವಿವಾದ ಏಕೆ?: ಉದ್ಧವ್ ಠಾಕ್ರೆ ಪ್ರಶ್ನೆ
ಆದಿತ್ಯ ಠಾಕ್ರೆ - ಉದ್ಧವ್ ಠಾಕ್ರೆ | Photo: ANI
ಮುಂಬೈ: ಔರಂಗಜೇಬ್ ಸಮಾಧಿಯನ್ನು ನೆಲಸಮಗೊಳಿಸಬೇಕು ಎಂದು ಆಗ್ರಹಿಸಿ ನಾಗ್ಪುರದಲ್ಲಿ ನಡೆದಿರುವ ಘರ್ಷಣೆ ಹಾಗೂ ಧ್ವಂಸ ಘಟನೆಗಳನ್ನು ಮಂಗಳವಾರ ಖಂಡಿಸಿದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಔರಂಗಜೇಬ್ 300 ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಈ ವಿವಾದದ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದ್ದಾರೆ.
“ನಿಮಗೆ ಬೇಕಿದ್ದರೆ, ನೀವು ಆತನ ಸಮಾಧಿಯನ್ನು ತೆರವುಗೊಳಿಸಬಹುದು. ಆದರೆ, ಅದಕ್ಕೂ ಮುನ್ನ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ರನ್ನು ಕರೆದು ಮಾತನಾಡಿ” ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಕ್ರಮವಾಗಿ ಆಂಧ್ರಪ್ರದೇಶ ಹಾಗೂ ಬಿಹಾರ ರಾಜ್ಯಗಳ ಮುಖ್ಯಮಂತ್ರಿಗಳಾಗಿದ್ದು, ಅವರಿಬ್ಬರ ಪಕ್ಷಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಪ್ರಮುಖ ಮಿತ್ರಪಕ್ಷಗಳಾಗಿವೆ. ಈ ರಾಜ್ಯಗಳಲ್ಲಿ ಮುಸ್ಲಿಂ ಮತದಾರರ ಪ್ರಮಾಣ ಗಣನೀಯವಾಗಿದ್ದು, ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ ಹಾಗೂ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ ಪಕ್ಷಗಳೆರಡಕ್ಕೂ ಮುಸ್ಲಿಂ ಮತದಾರರು ಮುಖ್ಯವಾಗಿದ್ದಾರೆ. ವಿಶೇಷವಾಗಿ, ಮುಂದಿನ ವರ್ಷ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಸಂಯುಕ್ತ ಜನತಾದಳ ಪಕ್ಷದ ಗೆಲುವಿನಲ್ಲಿ ನಿರ್ಣಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಮೇಲಿನಂತೆ ಬಿಜೆಪಿಯನ್ನು ತಿವಿದಿದ್ದಾರೆ.
ಔರಂಗಜೇಬ್ ವಾಸ್ತವವಾಗಿ ಗುಜರಾತ್ ನಲ್ಲಿ ಜನಿಸಿದ್ದ. ಆತ 1618ರಲ್ಲಿ ಗುಜರಾತ್ ನ ದಾಹೋಡ್ ನಲ್ಲಿ ಜನಿಸಿ, 1707ರಲ್ಲ ಮಹಾರಾಷ್ಟ್ರದ ಭಿಂಗರ್ ಬಳಿ ಮೃತಪಟ್ಟಿದ್ದ ಎಂದೂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಉದ್ಧವ್ ಠಾಕ್ರೆಯ ಹೇಳಿಕೆಯನ್ನು ಪುನರುಚ್ಚರಿಸಿದ ಅವರ ಪುತ್ರ ಆದಿತ್ಯ ಠಾಕ್ರೆ, ರಾಜ್ಯ ಸರಕಾರದ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಈ ವಿವಾದವನ್ನು ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಬಿಜೆಪಿ ವಿರುದ್ಧ ತೀಕ್ಷ್ಣ ಪ್ರಹಾರ ನಡೆಸಿದ ಅವರು, ನಾಗ್ಪುರ ಜಿಲ್ಲೆಯನ್ನು ಮಹಾರಾಷ್ಟ್ರದ ಮಣಿಪುರವನ್ನಾಗಿಸಲು ಬಿಜೆಪಿ ಯತ್ನಿಸುತ್ತಿದೆ ಎಂದೂ ದೂರಿದರು.