ದಿಹುಲಿ ಹತ್ಯಾಕಾಂಡ : 44 ವರ್ಷಗಳ ಬಳಿಕ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ
Photo - ETV Bharat
ಹೊಸದಿಲ್ಲಿ : 1981ರಲ್ಲಿ ದಿಹುಲಿ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ 24 ಮಂದಿಯ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಮೂವರು ಅಪರಾಧಿಗಳಿಗೆ ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿರುವ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿದೆ.
ಮೈನ್‌ಪುರಿಯಲ್ಲಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಸಿಂಗ್ ದಿಹುಲಿ ಹತ್ಯಾಕಾಂಡಕ್ಕೆ ಸಂಬಂಧಿಸಿ ಕಪ್ತಾನ್ ಸಿಂಗ್, ರಾಮ್ ಪಾಲ್ ಮತ್ತು ರಾಮ್ ಸೇವಕ್‌ಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿದ್ದಾರೆ. ಸವರ್ಣೀಯ ಜಾತಿಗೆ ಸೇರಿದ ಕೆಲ ಅಪರಾಧಿಗಳ ವಿರುದ್ಧ ಸಾಕ್ಷ್ಯ ನೀಡಿದ ದಲಿತ ಸಾಕ್ಷಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಡಕಾಯಿತರ ಗ್ಯಾಂಗ್ ನಡೆಸಿದ ಹತ್ಯಾಕಾಂಡದ 44 ವರ್ಷಗಳ ಬಳಿಕ ಈ ತೀರ್ಪು ಹೊರ ಬಂದಿದೆ.
2025ರ ಮಾರ್ಚ್ 13ರಂದು ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದಕ್ಕಾಗಿ ನ್ಯಾಯಾಲಯವು ಕಪ್ತಾನ್ ಸಿಂಗ್, ರಾಮ್ ಪಾಲ್ ಮತ್ತು ರಾಮ್ ಸೇವಕ್ ನನ್ನು ಅಪರಾಧಿಗಳೆಂದು ಘೋಷಿಸಿತು.
ದಿಹುಲಿ ಹತ್ಯಾಕಾಂಡ :
1981ರ ನವೆಂಬರ್ 18ರಂದು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದ 17 ಮಂದಿ ಡಕಾಯಿತರ ತಂಡ ರಾಧೇಶ್ಯಾಮ್ ಸಿಂಗ್ ಮತ್ತು ಸಂತೋಷ್ ಸಿಂಗ್ ಎಂಬಾತನ ನೇತೃತ್ವದಲ್ಲಿ ಫಿರೋಝಾಬಾದ್ ಜಿಲ್ಲೆಯ ದಿಹುಲಿ ಗ್ರಾಮದಲ್ಲಿ ದಲಿತ ಕುಟುಂಬವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಹಿಳೆ, ಇಬ್ಬರು ಮಕ್ಕಳು ಸೇರಿದಂತೆ 24 ಮಂದಿ ಮೃತಪಟ್ಟಿದ್ದರು. ಆ ಬಳಿಕ ಅವರ ಬಳಿ ಇದ್ದ ವಸ್ತುಗಳನ್ನು ದೋಚಿದ್ದರು. ಈ ಕುರಿತು 17 ಆರೋಪಿಗಳ ವಿರುದ್ಧ ಜಸರಾಣಾ ಪೊಲೀಸ್ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ ಮತ್ತು ಡಕಾಯಿತಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ನಡೆಸಿದ ಪೊಲೀಸರು 17 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ವಿಚಾರಣೆ ಹಂತದಲ್ಲೇ ಸಂತೋಷ್ ಮತ್ತು ರಾಧೇ ಸೇರಿ 13 ಆರೋಪಿಗಳು ಮೃತಪಟ್ಟಿದ್ದಾರೆ. ಬದುಕುಳಿದಿರುವ ನಾಲ್ವರಲ್ಲಿ ಓರ್ವ ನಾಪತ್ತೆಯಾಗಿದ್ದಾನೆ. ಉಳಿದ ಮೂವರು ವಿಚಾರಣೆ ಎದುರಿಸಿದ್ದರು.