ಮುಂಬೈ | ಮಸೀದಿಯ ‘ಅಕ್ರಮ’ಭಾಗ ಕೆಡವಲು ಮುಂದಾದ ಬಿಎಂಸಿ ; ಸ್ಥಳೀಯರ ವಿರೋಧ, ಧಾರಾವಿ ಉದ್ವಿಗ್ನ
ಮುಂಬೈ : ಮುಂಬೈನ ಧಾರಾವಿ ಕೊಳಗೇರಿಯಲ್ಲಿನ ಮಸೀದಿಯೊಂದನ್ನು ಭಾಗಶಃ ಕೆಡವಲು ಮುಂದಾಗಿದ್ದ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ ಕ್ರಮವನ್ನು ಸ್ಥಳೀಯ ನಿವಾಸಿಗಳು ತಡೆದ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದ್ದು, ನೂರಾರು ಜನರು ರಸ್ತೆಯಲ್ಲಿ ಸಮಾವೇಶಗೊಂಡಿದ್ದರು.
ಜಿ-ನಾರ್ಥ್ ಆಡಳಿತಾತ್ಮಕ ವಾರ್ಡ್‌ನ ಬಿಎಂಸಿ ಅಧಿಕಾರಿಗಳ ತಂಡವು ಬೆಳಿಗ್ಗೆ ಒಂಭತ್ತು ಗಂಟೆಯ ಸುಮಾರಿಗೆ 90 ಅಡಿ ರಸ್ತೆಯಲ್ಲಿನ ಮೆಹಬೂಬ-ಎ-ಸುಭಾನಿ ಮಸೀದಿಯ ಅಕ್ರಮವಾಗಿ ನಿರ್ಮಾಣಗೊಂಡಿದೆ ಎನ್ನಲಾಗಿರುವ ಭಾಗವನ್ನು ನೆಲಸಮಗೊಳಿಸಲು ತಲುಪಿತ್ತು. ಭಾರೀ ಸಂಖ್ಯೆಯಲ್ಲಿ ಅಲ್ಲಿ ಸೇರಿದ್ದ ಸ್ಥಳೀಯ ನಿವಾಸಿಗಳು ಮಸೀದಿಯಿರುವ ಓಣಿಯನ್ನು ತಂಡವು ಪ್ರವೇಶಿಸುವುದನ್ನು ತಡೆದಿದ್ದರು ಎಂದು ಅಧಿಕಾರಿಯೋರ್ವರು ತಿಳಿಸಿದರು.
ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಅಲ್ಲಿ ಭಾರೀ ಸಂಖ್ಯೆಯಲ್ಲಿ ಪೋಲಿಸರನ್ನು ನಿಯೋಜಿಸಲಾಗಿದೆ ಎಂದರು.
ಬಿಎಂಸಿಯ ಕ್ರಮವನ್ನು ವಿರೋಧಿಸಿ ನೂರಾರು ಜನರು ಧಾರಾವಿ ಪೋಲಿಸ್ ಠಾಣೆಯ ಮುಂದೆ ರಸ್ತೆಯಲ್ಲಿ ಧರಣಿ ನಡೆಸಿದರು. ಭಾರೀ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು,ಪರಿಸ್ಥಿತಿಯು ಈಗ ನಿಯಂತ್ರಣದಲ್ಲಿದೆ ಎಂದೂ ಅಧಿಕಾರಿ ತಿಳಿಸಿದರು.
ಸಮಸ್ಯೆಯನ್ನು ಬಗೆಹರಿಸಲು ಮಸೀದಿಯ ನಿಯೋಗ ಮತ್ತು ಬಿಎಂಸಿ ಅಧಿಕಾರಿಗಳ ನಡುವೆ ಮಾತುಕತೆಗಳು ನಡೆಯುತ್ತಿವೆ.
ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೊಳಗೇರಿಯಾಗಿರುವ ಧಾರಾವಿ ಹೆಚ್ಚು ಜನನಿಬಿಡ ಪ್ರದೇಶವಾಗಿದೆ.