ಕಸ್ಟಡಿಯಲ್ಲಿ ಲೈಂಗಿಕ ಹಲ್ಲೆ ಪ್ರಕರಣ | ಒಡಿಶಾ ರಾಜಭವನ ಬಳಿ ಬಿಜೆಡಿ ಧರಣಿ

Update: 2024-09-21 14:52 GMT

PC : PTI 

ಭುವನೇಶ್ವರ : ಇಲ್ಲಿಯ ಭರತಪುರ ಪೋಲಿಸ್ ಠಾಣೆಯಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಡಿ ಮತ್ತು ಕಾಂಗ್ರೆಸ್ ಶನಿವಾರ ಪ್ರತಿಭಟನೆ ನಡೆಸಿದವು.

ಬಿಜೆಡಿಯ ಮಹಿಳಾ ಘಟಕವು ರಾಜಭವನದ ಮುಂದೆ ಧರಣಿಯನ್ನು ನಡೆಸಿದರೆ ಅತ್ತ ಕಾಂಗ್ರೆಸ್ ಕಾರ್ಯಕರ್ತರು ಘಟನೆಯ ಕುರಿತು ಮುಖ್ಯಮಂತ್ರಿ ಮೋಹನ ಚರಣ ಮಾಝಿ ಅವರ ರಾಜೀನಾಮೆಗೆ ಆಗ್ರಹಿಸಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು. ಮಾಝಿ ಗೃಹ ಖಾತೆಯನ್ನೂ ನಿರ್ವಹಿಸುತ್ತಿದ್ದಾರೆ.

ಭಿತ್ತಿಪತ್ರಗಳು ಮತ್ತು ಬ್ಯಾನರ್‌ಗಳನ್ನು ಹಿಡಿದುಕೊಂಡಿದ್ದ ಬಿಜೆಡಿಯ ನೂರಾರು ಮಹಿಳಾ ಸದಸ್ಯರು ರಾಜಭವನದ ಮುಂದೆ ಧರಣಿ ನಡೆಸಿ ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರಕಾರವು ರಾಜ್ಯದ ನಿವಾಸಿಗಳನ್ನು, ವಿಶೇಷವಾಗಿ ಮಹಿಳೆಯರನ್ನು ರಕ್ಷಿಸುವಲ್ಲಿ ವಿಫಲಗೊಂಡಿದೆ ಎಂದು ಆರೋಪಿಸಿದರು.

ಭರತಪುರ ಪೋಲಿಸ್ ಠಾಣೆಯಲ್ಲಿ ಓರ್ವ ಸೇನಾಧಿಕಾರಿ ಮತ್ತು ಅವರ ಪ್ರೇಯಸಿಗೆ ಚಿತ್ರಹಿಂಸೆ ನೀಡಿದ ಆರೋಪ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ ತನಿಖೆ ಮತ್ತು ನ್ಯಾಯಾಂಗ ವಿಚಾರಣೆಗಾಗಿ ಆಗ್ರಹಿಸಿದ ಬಿಜೆಡಿ, ರಾಜ್ಯಪಾಲ ರಘುವರ ದಾಸ್ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಹವಾಲು ಸಲ್ಲಿಸಿತು.

ಮುಖ್ಯಮಂತ್ರಿಗಳ ನಿವಾಸದತ್ತ ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರು ಟೊಮೆಟೊಗಳು ಮತ್ತು ಮೊಟ್ಟೆಗಳನ್ನು ಎಸೆದಿದ್ದ ಕಂಡು ಬಂದಿತ್ತಾದರೂ ಪೋಲಿಸರು ಅವರನ್ನು ಕೆಲವು ಮೀಟರ್‌ಗಳಷ್ಟು ಹಿಂದೆಯೇ ತಡೆದಿದ್ದರಿಂದ ಅವು ಗುರಿ ತಲುಪಲಿಲ್ಲ.

ಈ ನಡುವೆ ಎರಡು ಪ್ರತ್ಯೇಕ ಮಹಿಳಾ ಕಾರ್ಯಕರ್ತರ ಗುಂಪುಗಳು ಸಹ ಇಲ್ಲಿಯ ಪೋಲಿಸ್ ಆಯುಕ್ತರ ಕಚೇರಿ ಬಳಿ ಧರಣಿ ನಡೆಸಿದವು. ತಪ್ಪಿತಸ್ಥ ಪೋಲಿಸರನ್ನು ತಕ್ಷಣ ಬಂಧಿಸುವಂತೆ ಒಂದು ಗುಂಪು ಆಗ್ರಹಿಸಿದರೆ, ವಿಚಾರಣೆ ಪೂರ್ಣಗೊಳ್ಳುವವರೆಗೆ ಯಾವುದೇ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು ಎಂದು ಇನ್ನೊಂದು ಗುಂಪು ಒತ್ತಾಯಿಸಿತು.

ಪಶ್ಚಿಮ ಬಂಗಾಳದಲ್ಲಿ ನಿಯೋಜಿತ ಸೇನಾಧಿಕಾರಿ ಮತ್ತು ಅವರ ಪ್ರೇಯಸಿ ಕೆಲವು ಸ್ಥಳೀಯ ಯುವಕರು ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಲು ಸೆ.15ರಂದು ಭರತಪುರ ಠಾಣೆಗೆ ತೆರಳಿದ್ದಾಗ ಈ ಘಟನೆ ನಡೆದಿತ್ತು. ಈ ಸಂದರ್ಭ ಕೆಲವು ಪೋಲಿಸರು ಮತ್ತು ಜೋಡಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಸೇನಾಧಿಕಾರಿ ಮತ್ತು ಅವರ ಪ್ರೇಯಸಿಯ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ಆರೋಪಿಸಿಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News