ಸುಪ್ರೀಂ ಮಧ್ಯಸ್ಥಿಕೆ ಬಳಿಕ 8 ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹೆಸರು ಅಂತಿಮಪಡಿಸಿದ ಕೇಂದ್ರ ಸರ್ಕಾರ
ಹೊಸದಿಲ್ಲಿ: ಕೊಲ್ಯಾಜಿಯಂ ಶಿಫಾರಸ್ಸುಗಳ ಸಾಂವಿಧಾನಿಕ ಮಹತ್ವವನ್ನು ಸುಪ್ರೀಂಕೋರ್ಟ್ ದೃಢಪಡಿಸಿದ ಬಳಿಕ ಕೇಂದ್ರ ಸರ್ಕಾರ ಶನಿವಾರ ಎಂಟು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಗೆ ಒಪ್ಪಿಗೆ ನೀಡಿದೆ.
ಕೊಲ್ಯಾಜಿಯಂ ಶಿಫಾರಸ್ಸುಗಳು ಕೇವಲ ಸಲಹೆಗಳು ಮಾತ್ರವಲ್ಲ; ಇದಕ್ಕೆ ಸಂವಿಧಾನಿಕ ಬದ್ಧತೆ ಇದೆ ಎಂದು ದೇಶದ ಅತ್ಯುನ್ನತ ಕೋರ್ಟ್ ಅಟಾರ್ನಿ ಜನರಲ್ ಅವರಿಗೆ ಮನವರಿಕೆ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
ನ್ಯಾಯಾಂಗ ನೇಮಕಾತಿ ವಿಚಾರದಲ್ಲಿ ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಸಂಘರ್ಷಗಳು ಹೆಚ್ಚುತ್ತಿರುವ ನಡುವೆ ಈ ನೇಮಕಾತಿಗೆ ವಿಶೇಷ ಮಹತ್ವ ಬಂದಿದೆ. ಹೊಸ ನೇಮಕಾತಿಯಲ್ಲಿ ದೆಹಲಿ ಹೈಕೋರ್ಟ್ ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮನಮೋಹನ್ ಅವರನ್ನು ಅದೇ ಹುದ್ದೆಯಲ್ಲಿ ಕಾಯಂಗೊಳಿಸಲಾಗಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ರಾಜೀವ್ ಶಕ್ದೇರ್ ಅವರನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ಸಿಜೆ ಆಗಿ ನೇಮಕ ಮಾಡಲಾಗಿದೆ.
ದೆಹಲಿ ಹೈಕೋರ್ಟ್ ನ ಮತ್ತೊಬ್ಬ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ಅವರು ಮಧ್ಯಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಕೊಲ್ಕತ್ತಾ ಹೈಕೋರ್ಟ್ ನ ನ್ಯಾಯಮೂರ್ತಿ ಇಂದ್ರಪ್ರಸನ್ನ ಮುಖರ್ಜಿಯವರನ್ನು ಮೇಘಾಲಯ ಹೈಕೋರ್ಟ್ ಸಿಜೆ ಆಗಿ ನೇಮಿಸಲಾಗಿದೆ. ಮುಂಬೈ ಹೈಕೋರ್ಟ್ ನ್ಯಾಯಮೂರ್ತಿ ನಿತಿನ್ ಮಧುಕರ್ ಜಮಾದಾರ್ ಅವರನ್ನು ಕೇರಳ ಹೈಕೋರ್ಟ್ ಸಿಜೆ ಆಗಿ ನೇಮಕ ಮಾಡಲಾಗಿದೆ.
ಜಮ್ಮು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ನ ನ್ಯಾಯಮೂರ್ತಿ ತಶಿ ರಬ್ ಸ್ತನ್ ಅವರು ಅದೇ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಮುಂಬೈ ಹೈಕೋರ್ಟ್ ನ್ಯಾಯಮೂರ್ತಿ ಕೆ.ಆರ್.ಶ್ರೀರಾಮ್ ಅವರು ಮದ್ರಾಸ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಮತ್ತು ಹಿಮಾಚಲ ಪ್ರದೇಶ ಹೈಕೋರ್ಟ್ ಸಿಜೆ ಆಗಿರುವ ಎಂ.ಎಸ್.ರಾಮಚಂದ್ರರಾಔ ಅವರು ಜಾರ್ಖಂಡ್ ಹೈಕೋರ್ಟ್ ಸಿಜೆ ಆಗಿ ನೇಮಕಗೊಂಡಿದ್ದಾರೆ.