ವಿಧಾನಸಭಾ ಚುನಾವಣೆಗೂ ಮುನ್ನ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚಿನ ಅಧಿಕಾರ ನೀಡಿದ ಕೇಂದ್ರ ಸರಕಾರ
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ ಕಾಯ್ದೆಗೆ ಶನಿವಾರ ತಿದ್ದುಪಡಿ ತಂದಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ, ಲೆಫ್ಟಿನೆಂಟ್ ಗವರ್ನರ್ ಅವರಿಗೆ ಮತ್ತಷ್ಟು ಹೆಚ್ಚಿನ ಅಧಿಕಾರ ನೀಡಿದೆ.
ಈ ಸಂಬಂಧ ಹೊರಡಿಸಿರುವ ಅಧಿಸೂಚನೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್‍ವಿಂಗಡಣೆ ಕಾಯ್ದೆಯ ಸೆಕ್ಷನ್ 55ಕ್ಕೆ ತಿದ್ದುಪಡಿಯನ್ನು ತರಲಾಗಿದೆ. ಇದರಲ್ಲಿ ಹೆಚ್ಚಿನ ಸೆಕ್ಷನ್‍ಗಳನ್ನು ಸೇರಿಸಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ.
ತಿದ್ದುಪಡಿಯಾಗಿರುವ ನಿಯಮಗಳಂತೆ, ಲೆಫ್ಟಿನೆಂಟ್ ಜನರ್ ಅವರಿಗೆ ಅಡ್ವೊಕೇಟ್ ಜನರಲ್ ಅವರನ್ನು ನೇಮಕ ಮಾಡುವ ಅಧಿಕಾರ ಇರುತ್ತದೆ. ವಿಚಾರಣೆಗೆ ಅನುಮತಿ ನೀಡಲು ಮತ್ತು ಮೇಲ್ಮನವಿ ಸಲ್ಲಿಸಲು ಅನುಮತಿ ನೀಡುವ ಅಧಿಕಾರವೂ ಇರುತ್ತದೆ.
ಈ ತಿದ್ದುಪಡಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕಿದ್ದು ಅಧಿಸೂಚನೆ ಪ್ರಕಟವಾಗಿದೆ. ತಿದ್ದುಪಡಿಗಳು ಜುಲೈ 12 ರಂದು ಜಾರಿಗೆ ಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಸರಕಾರದ ಕ್ರಮ ಚರ್ಚೆಗೆ ಕಾರಣವಾಗಿದೆ.