ಲೋಕಸಭೆ ಚುನಾವಣೆ: ಅಭ್ಯರ್ಥಿ ಆಯ್ಕೆಗೆ ಮಧ್ಯರಾತ್ರಿ ಸಭೆ ನಡೆಸಿದ ಬಿಜೆಪಿ
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಪಡಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಬಿಜೆಪಿಯ ಉನ್ನತ ಮುಖಂಡರ ಸಭೆ ಗುರುವಾರ ಮಧ್ಯರಾತ್ರಿ ನಡೆಯಿತು.
ಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನವೇ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ಹೇಳಿವೆ. ಇದು ಇನ್ನೂ ಸ್ಥಾನ ಹೊಂದಾಣಿಕ ಚರ್ಚೆ ನಡೆಸುವ ಹಂತದಲ್ಲಿರುವ ವಿರೋಧಿ ಇಂಡಿಯಾ ಮೈತ್ರಿಕೂಟದ ಮೇಲೆ ಒತ್ತಡ ಹೆಚ್ಚಿಸುವ ಸಾಧ್ಯತೆ ಇದೆ.
ನರೇಂದ್ರ ಮೋದಿ, ಅಮಿತ್ ಶಾ, ಪಕ್ಷದ ಮುಖ್ಯಸ್ಥ ಜೆ.ಪಿ.ನಡ್ಡಾ ಹಾಗೂ ಹಿರಿಯ ಮುಖಂಡರಾದ ರಾಜನಾಥ್ ಸಿಂಗ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
550 ಮಂದಿ ಸದಸ್ಯರನ್ನು ಹೊಂದಿರುವ ಕೇಂದ್ರೀಯ ಚುನಾವಣಾ ಸಮಿತಿ ಅಂತಿಮಪಡಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಸಭೆ ಪರಾಮರ್ಶಿಸಿತು.
ಇದಕ್ಕೂ ಮುನ್ನ ಮೋದಿಯವರು ಅಮಿತ್ ಶಾ ಹಾಗೂ ನಡ್ಡಾ ಅವರ ಜತೆ ತಮ್ಮ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸಿದ್ದು, ಸಿಇಸಿಯ ಇತರ ಸದಸ್ಯರು ಬಿಜೆಪಿ ಕಚೇರಿಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ನೀಡುವಲ್ಲಿ ನಿರತರಾಗಿದ್ದರು.
ಹಿರಿಯ ಮುಖಂಡರಾದ ದೇವೇಂದ್ರ ಫಡ್ನವೀಸ್, ಪ್ರಕಾಶ್ ಜಾವ್ಡೇಕರ್, ಮನ್ ಸುಖ್ ಭಾಯ್ ಮಾಂಡವಿಯ, ಪುಷ್ಕರ್ ಧಾಮಿ, ಪ್ರಮೋದ್ ಸಾವಂತ್, ಭೂಪೇಂದ್ರ ಯಾದವ್, ಜ್ಯೋತಿರಾದಿತ್ಯ ಸಿಂಧ್ಯಾ, ಕೇಶವ್ ಮೌರ್ಯ, ಆದಿತ್ಯನಾಥ್ ಮತ್ತಿತರರು ಕೂಡಾ ಸಭೆಯಲ್ಲಿದ್ದರು.