ಲೋಕಸಭೆ ಚುನಾವಣೆ: ರವಿವಾರ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ
ಹೊಸದಿಲ್ಲಿ: ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಹೊಸದಿಲ್ಲಿಯಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ರವಿವಾರ ಬಿಡುಗಡೆ ಮಾಡಲಿದೆ.
‘‘ಸಂಕಲ್ಪ ಪತ್ರ’’ ಎಂದು ಕರೆಯಲಾಗುವ ಬಿಜೆಪಿಯ ಪ್ರಣಾಳಿಕೆ ‘ವೀಕ್ಷಿತ್ ಭಾರತ್’ ಮಾರ್ಗಸೂಚಿಯ ಜೊತೆಗೆ ಕಲ್ಯಾಣ ಹಾಗೂ ಅಭಿವೃದ್ಧಿ ಯೋಜನೆಗಳ ಅಂಶಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ.
ಬಡವರು, ಯುವಕರು, ಮಹಿಳೆಯರು ಹಾಗೂ ರೈತರಿಗೆ ತನ್ನ ಸರಕಾರ ಆದ್ಯತೆ ನೀಡುತ್ತಿದೆ ಎಂದು ಮೋದಿ ಅವರು ನಿರಂತರ ಪ್ರತಿಪಾದಿಸುತ್ತಿರುವುದರಿಂದ ಆಡಳಿತಾರೂಢ ಬಿಜೆಪಿ ಅವರಿಗೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಾಮುಖ್ಯತೆ ನೀಡುವ ಸಾಧ್ಯತೆ ಇದೆ.
ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನದಂದು ನಡೆಯುವ ಪ್ರಣಾಳಿಕೆ ಅನಾವರಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ನಾಯಕರು ಪಾಲ್ಗೊಳ್ಳಲಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ 370ನೇ ವಿಧಿ ರದ್ದತಿ ಸೇರಿದಂತೆ ಪ್ರಮುಖ ಸೈದ್ಧಾಂತಿಕ ಭರವಸೆಗಳನ್ನು ಈಡೇರಿಸಿದೆ. ಈಗ ಎಲ್ಲರ ಕಣ್ಣು ಪ್ರಣಾಳಿಕೆಯಲ್ಲಿ ಬಿಜೆಪಿಯ ಸಂಸ್ಕೃತಿ ಹಾಗೂ ಹಿಂದುತ್ವದ ಕಾರ್ಯಸೂಚಿಗಳು ಹೇಗೆ ಸ್ಥಾನ ಪಡೆದುಕೊಂಡಿವೆ ಎಂಬ ಬಗ್ಗೆ ಕೇಂದ್ರೀಕೃತವಾಗಿವೆ.
ತನ್ನ ಪ್ರಣಾಳಿಕೆಯನ್ನು ಸಿದ್ಧಪಡಿಸಲು ರಕ್ಷಣಾ ಸಚಿವ ಹಾಗೂ ಬಿಜೆಪಿಯ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ನೇತೃತ್ವದಲ್ಲಿ 27 ಸದಸ್ಯರ ಸಮಿತಿ ರೂಪಿಸಲಾಗಿದೆ ಎಂದು ಬಿಜೆಪಿ ಕಳೆದ ತಿಂಗಳು ಪ್ರಕಟಿಸಿತ್ತು.