ಉತ್ತರ ಪ್ರದೇಶ | ಆನ್ ಲೈನ್ ನಲ್ಲಿ ಐಫೋನ್ ಆರ್ಡರ್ ಮಾಡಿ, ಡೆಲಿವರಿ ಬಾಯ್ ನನ್ನು ಹತ್ಯೆಗೈದ ಗ್ರಾಹಕ
ಲಕ್ನೊ: 1.5 ಲಕ್ಷ ರೂ. ಮೌಲ್ಯದ ಐಫೋನ್ ಅನ್ನು ಸ್ವೀಕರಿಸಿದ ನಂತರ, ಗ್ರಾಹಕನೊಬ್ಬ ಇ -ಕಾಮರ್ಸ್ ಸಂಸ್ಥೆಯೊಂದರ ಡೆಲಿವರಿ ಬಾಯ್ ಅನ್ನು ಹತ್ಯೆಗೈದಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಪೊಲೀಸರ ಪ್ರಕಾರ, ಲಕ್ನೊದ ಚಿನ್ಹಟ್ ಪ್ರದೇಶದ ನಿವಾಸಿಯಾದ ಗಜೇಂದ್ರ ಕುಮಾರ್ ಎಂಬ ವ್ಯಕ್ತಿ ಇ-ಕಾಮರ್ಸ್ ಕಂಪನಿಯೊಂದರಿಂದ 1.5 ಲಕ್ಷ ರೂ. ಮೌಲ್ಯದ ಐಫೋನ್ ಗೆ ಆರ್ಡರ್ ಮಾಡಿದ್ದ ಎನ್ನಲಾಗಿದೆ. ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಆತ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.
ಭರತ್ ಸಾಹು ಎಂಬ ನಿಶಾಂತ್ ಗಂಜ್ ಪ್ರದೇಶದ ನಿವಾಸಿಯು ಐಫೋನ್ ಅನ್ನು ಡೆಲಿವರಿಗೆ ಸಂಜೆ ಗಜೇಂದ್ರ ಕುಮಾರ್ ನಿವಾಸಕ್ಕೆ ತೆರಳಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಐಫೋನ್ ಅನ್ನು ಪೂರೈಸಿದ ನಂತರ ಭರತ್ ಸಾಹು ನಗದಿಗಾಗಿ ಮನವಿ ಮಾಡಿದ್ದಾರೆ. ಆಗ ಗಜೇಂದ್ರ ಹಾಗೂ ಆತನೊಂದಿಗಿದ್ದ ಸ್ನೇಹಿತನೊಬ್ಬ, ಭರತ್ ಸಾಹುವನ್ನು ಮನೆಯೊಳಗೆ ಕರೆದಿದ್ದಾರೆ. ಅದರಂತೆ ಮನೆಯೊಳಗೆ ತೆರಳಿದ ಭರತ್ ಸಾಹುವಿನ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ.
ನಂತರ, ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿರುವ ಆರೋಪಿಗಳು, ಆ ಗೋಣಿ ಚೀಲವನ್ನು ಸಮೀಪದ ಇಂದಿರಾ ನಾಲೆಗೆ ಎಸೆದಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆ ಸೆಪ್ಟೆಂಬರ್ 23 ರಂದು ನಡೆದಿದ್ದರೂ, ಸೋಮವಾರ ಈ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಗಜೇಂದ್ರನನ್ನು ಬಂಧಿಸಿದ್ದಾರೆ.
ತಮ್ಮ ಪುತ್ರ ಕಾಣೆಯಾಗಿದ್ದಾನೆ ಎಂದು ಭರತ್ ಸಾಹು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ, ಭರತ್ ಸಾಹು ಮಾಡಿದ್ದ ಕೊನೆಯ ಕರೆಯನ್ನು ಪತ್ತೆ ಹಚ್ಚುವ ಮೂಲಕ, ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತದೇಹವನ್ನು ವಶಪಡಿಸಿಕೊಳ್ಳಲು ಸೋಮವಾರ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ತಲೆಮರೆಸಿಕೊಂಡಿರುವ ಗಜೇಂದ್ರನ ಸ್ನೇಹಿತನನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.