ಮಹಾರಾಷ್ಟ್ರ: ಸೇತುವೆ ನಿರ್ಮಾಣದ ವೇಳೆ ಕ್ರೇನ್‌ ಕುಸಿದು 17 ಕಾರ್ಮಿಕರು ಮೃತ್ಯು

Update: 2023-08-01 05:43 GMT

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸಮೃದ್ಧಿ ಎಕ್ಸ್‌ಪ್ರೆಸ್‌ವೇ ಮೂರನೇ ಹಂತದ ನಿರ್ಮಾಣದ ವೇಳೆ ಸೇತುವೆಯ ಸ್ಲ್ಯಾಬ್‌ ಮೇಲೆ ಕ್ರೇನ್ ಕುಸಿದು ಕನಿಷ್ಠ 17 ಕಾರ್ಮಿಕರು ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಮುಂಬೈನಿಂದ ಸುಮಾರು 80 ಕಿಮೀ ದೂರದಲ್ಲಿರುವ ಶಹಾಪುರ ತಹಸಿಲ್ ವ್ಯಾಪ್ತಿಯ ಸರ್ಲಾಂಬೆ ಗ್ರಾಮದ ಬಳಿ ಬೆಳಿಗ್ಗೆ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸೇತುವೆ ನಿರ್ಮಾಣದಲ್ಲಿ ಮತ್ತು ಹೆದ್ದಾರಿ ನಿರ್ಮಾಣ ಯೋಜನೆಗಳಲ್ಲಿ ಪ್ರಿಕಾಸ್ಟ್ ಬಾಕ್ಸ್ ಗರ್ಡರ್‌ಗಳನ್ನು ಅಳವಡಿಸಲು ಬಳಸಲಾಗುವ ಮೊಬೈಲ್ ಗ್ಯಾಂಟ್ರಿ ಕ್ರೇನ್ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, “ಮಹಾರಾಷ್ಟ್ರದ ಶಹಾಪುರದಲ್ಲಿ ನಡೆದ ಭೀಕರ ದುರ್ಘಟನೆಯಿಂದ ನೋವಾಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪ. ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಆಡಳಿತವು ಅಪಘಾತದ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂತ್ರಸ್ತರಿಗೆ ಸರಿಯಾದ ಸಹಾಯವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪಿಎಂಎನ್‌ಆರ್‌ಎಫ್‌ನಿಂದ 2 ಲಕ್ಷ ರೂ.ಗಳನ್ನು ಮೃತರ ಮುಂದಿನ ಸಂಬಂಧಿಕರಿಗೆ ನೀಡಲಾಗುತ್ತದೆ. ಗಾಯಾಳುಗಳಿಗೆ ರೂ. 50 ಸಾವಿರ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ” ಎಂದು ತಿಳಿಸಿದ್ದಾರೆ.

ಶಹಾಪುರ ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

“ಕಾರ್ಮಿಕರ ಸಾವು ಅತ್ಯಂತ ದುಃಖಕರ ಮತ್ತು ಹೃದಯ ವಿದ್ರಾವಕವಾಗಿದೆ. ಅವರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬದವರ ದುಃಖದಲ್ಲಿ ನಾವು ಭಾಗಿಯಾಗುತ್ತೇವೆ. ಅಪಘಾತದಲ್ಲಿ ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಫಡ್ನವೀಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News