“ಚಂದ್ರಶೇಖರ್‌ ಆಝಾದ್‌ ಮುಂದಿನ ಬಾರಿ ಬದಕುಳಿಯುವುದಿಲ್ಲ” ಎಂದು ಪೋಸ್ಟ್‌ ಮಾಡಿದ್ದ ವ್ಯಕ್ತಿಯ ಬಂಧನ

Update: 2023-06-30 11:08 GMT

ಚಂದ್ರಶೇಖರ್‌ ಆಝಾದ್‌

ಅಮೇಠಿ: ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಝಾದ್‌ ಅವರ ಮೇಲೆ ಬುಧವಾರ ನಡೆದ ದಾಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯೊಡ್ಡುವ ಪೋಸ್ಟ್‌ ಮಾಡಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ವಿಮಲೇಶ್‌ ಸಿಂಗ್‌ (30) ಎಂಬ ಹೆಸರಿನ ಬಂಧಿತ ಹೊರನೋಟಕ್ಕೆ ಆಝಾದ್‌ ಮೇಲಿನ ದಾಳಿಯಲ್ಲಿ ಶಾಮೀಲಾಗಿರುವುದು ಕಂಡುಬಂದಿಲ್ಲವಾದರೂ, ಆರು ದಿನಗಳ ಹಿಂದೆ “ಕ್ಷತ್ರಿಯ ಆಫ್‌ ಅಮೇಠಿ” ಎಂಬ ಫೇಸ್ಬುಕ್‌ ಪುಟವೊಂದರಲ್ಲಿ ಹಾಕಲಾದ ಪೋಸ್ಟ್‌ನಲ್ಲಿ ಆಝಾದ್‌ ಅವರನ್ನು ಅಮೇಠಿಯಲ್ಲಿ ಠಾಕೂರರು ಹಾಡುಹಗಲಲ್ಲೇ ಹತ್ಯೆಗೈಯ್ಯಲಿದ್ದಾರೆ ಎಂದು ಬರೆಯಲಾಗಿತ್ತು.

ಗುರುವಾರ ಅದೇ ಪುಟದಲ್ಲಿಇನ್ನೊಂದು ಪೋಸ್ಟ್‌ನಲ್ಲಿ “ಆಝಾದ್‌ ಅವರಿಗೆ ಸೊಂಟದ ಭಾಗದಲ್ಲಿ ಗುಂಡಿಕ್ಕಲಾಗಿದೆ ಆದರೆ ಮುಂದಿನ ಬಾರಿ ಅವರು ಬದುಕುಳಿಯುವುದಿಲ್ಲ,” ಎಂದು ಬರೆಯಲಾಗಿತ್ತು. ಅಷ್ಟೇ ಅಲ್ಲದೆ ಯಾವುದೇ ನಿರಪರಾಧಿ ರಾಜಪುತನನ್ನು ಆಜಾದ್‌ ಮೇಲಿನ ದಾಳಿ ಪ್ರಕರಣದಲ್ಲಿ ಸಿಲುಕಿಸಿದರೆ ಭಾರೀ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಬುಧವಾರ ಸಹರಣಪುರದ ದಿಯೋಬಂದ್‌ ಎಂಬಲ್ಲಿ ತಮ್ಮ ಕಾರಿನ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಭೀಮ್‌ ಆರ್ಮಿ ಮುಖ್ಯಸ್ಥ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಈ ಘಟನೆ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಅವರು ವಹಿಸಿದ ಮೌನವು ಅವರು ಉತ್ತರ ಪ್ರದೇಶದಲ್ಲಿ ಅಪರಾಧವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ,” ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News