ಪುತ್ರನನ್ನು ರಕ್ಷಿಸಲು ಯತ್ನಿಸಿದ ತಂದೆಯನ್ನು ಇಟ್ಟಿಗೆಗಳಿಂದ ಹೊಡೆದು ಹತ್ಯೆಗೈದ ಗುಂಪು
ಹೊಸದಿಲ್ಲಿ: ಹುಡುಗರ ಗುಂಪೊಂದರಿಂದ ದಾಳಿಗೊಳಗಾಗಿದ್ದ ಮಗನನ್ನು ರಕ್ಷಿಸಲು ಯತ್ನಿಸಿದ 38 ವರ್ಷದ ವ್ಯಕ್ತಿಯನ್ನು ಇಟ್ಟಿಗೆಗಳಿಂದ ಹೊಡೆದು ಸಾಯಿಸಿದ ಘಟನೆ ರಾಜಧಾನಿಯ ಒಖ್ಲಾ ಫೇಸ್ ಎರಡರಲ್ಲಿರುವ ಸಂಜಯ್ ಕಾಲನಿ ಪ್ರದೇಶದಿಂದ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಮುಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ. ಅವರು ರೈಲ್ವೆ ನಿಲ್ದಾಣದಲ್ಲಿ ಹಮಾಲಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಇಬ್ಬರು ಅಪ್ರಾಪ್ತ ಪುತ್ರರೂ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆಗೆ ಸುಮಾರಿಗೆ ಹನೀಫ್ ಅವರ 14 ವರ್ಷದ ಪುತ್ರ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಬೈಕ್ ತರಲೆಂದು ಹೊರಹೋಗಿದ್ದ. ಆದರೆ ನಾಲ್ಕೈದು ಹುಡುಗರು ಬೈಕ್ ಮೇಲೆ ಕುಳಿತುಕೊಂಡು ಆತನಿಗೆ ಅಡ್ಡ ಬಂದಿದ್ದರೆನ್ನಲಾಗಿದೆ. ಹನೀಫ್ ದಾರಿ ಬಿಟ್ಟುಕೊಡುವಂತೆ ವಿನಂತಿಸಿದರೂ ಅವರು ಒಪ್ಪದೇ ಇದ್ದಾಗ ಜಗಳ ವಿಕೋಪಕ್ಕೆ ತಿರುಗಿತ್ತು ಎನ್ನಲಾಗಿದೆ.
ಗಲಾಟೆ ಸದ್ದು ಕೇಳಿ ಹನೀಫ್ ಹೊರಗೋಡಿ ಬಂದಾಗ ತನ್ನ ಪುತ್ರನ ಮೇಲೆ ಹಲ್ಲೆ ನಡೆಸಲಾಗುತ್ತಿರುವುದನ್ನು ಗಮನಿಸಿ ಆತನಿಗೆ ಸಹಾಯ ಮಾಡಲು ಯತ್ನಿಸಿದ್ದಾರೆ. ಆದರೆ ಆ ಹುಡುಗರು ಹನೀಫ್ ಮೇಲೆ ಇಟ್ಟಿಗೆಯಿಂದ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದರು. ತಕ್ಷಣ ಅಲ್ಲಿಗೆ ಮಾಹಿತಿ ದೊರೆತು ಬಂದ ಪೊಲೀಸರು ಗಾಯಾಳುವನ್ನು ಏಮ್ಸ್‌ಗೆ ದಾಖಲಿಸಿದರು. ಆದರೆ ಹನೀಫ್ ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.
ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಅಭೂತಪೂರ್ವ ಭದ್ರತಾ ಏರ್ಪಾಟುಗಳ ನಡುವೆ ಈ ಕೊಲೆ ನಡೆದಿದೆ.