ಮಣಿಪುರದಿಂದ ಮಹಾರಾಷ್ಟ್ರದವರೆಗೆ 'ಭಾರತ ನ್ಯಾಯ ಯಾತ್ರೆ'ಗೆ ಸಜ್ಜಾದ ರಾಹುಲ್ ಗಾಂಧಿ
ಹೊಸದಿಲ್ಲಿ: ದಕ್ಷಿಣ ಭಾರತದಿಂದ ಉತ್ತರ ಭಾರತದವರೆಗೆ ಭಾರತ್ ಜೋಡೊ ಯಾತ್ರೆ ಮಾಡಿ ಯಶಸ್ವಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಬಾರಿ ಪೂರ್ವದಿಂದ ಪಶ್ಚಿಮ ಭಾರತದವರೆಗೆ 'ಭಾರತ ನ್ಯಾಯ ಯಾತ್ರೆ' ಮಾಡಲು ಸಜ್ಜಾಗಿದ್ದಾರೆ. ಭಾರತ್ ಜೋಡೊ ಯಶಸ್ಸಿನ ಬಳಿಕ ದಕ್ಷಿಣ ಭಾರತದ ಎರಡು ರಾಜ್ಯಗಳಾದ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಉಲ್ಲೇಖಾರ್ಹ.
ಜನವರಿ 14ರಂದು ಮಣಿಪುರದಿಂದ ಮಹಾರಾಷ್ಟ್ರವರೆಗಿನ 6,200 ಕಿಮೀ ದೂರದ ಭಾರತ ನ್ಯಾಯ ಯಾತ್ರೆಗೆ ರಾಹುಲ್ ಗಾಂಧಿ ಚಾಲನೆ ನೀಡಲಿದ್ದಾರೆ. ಈ ಯಾತ್ರೆಯು ಲೋಕಸಭಾ ಚುನಾವಣೆಗೂ ಮುನ್ನ ಮಾರ್ಚ್ 20ರಂದು ಅಂತ್ಯಗೊಳ್ಳಲಿದೆ.
ಈ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ 14 ರಾಜ್ಯಗಳು ಹಾಗೂ 85 ಜಿಲ್ಲೆಗಳನ್ನು ಹಾದು ಹೋಗಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಮಣಿಪುರ, ನಾಗಾಲ್ಯಾಂಡ್, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಛತ್ತೀಸ್‌ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಹಾಗೂ ಮಹಾರಾಷ್ಟ್ರಕ್ಕೆ ತಲುಪಿ ಮುಂಬೈಯಲ್ಲಿ ಯಾತ್ರೆ ಸಮಾರೋಪಗೊಳ್ಳಲಿದೆ.
ಈ ಯಾತ್ರೆಯು ಬಸ್ ಪ್ರಯಾಣದೊಂದಿಗೆ ಪಾದ ಯಾತ್ರೆಯನ್ನೂ ಒಳಗೊಂಡಿರಲಿದೆ. ಹೆಚ್ಚು ಜನರಿಗೆ ಪ್ರವೇಶ ಒದಗಿಸಲು ಈ ಬಗೆಯ ಯೋಜನೆಯನ್ನು ರೂಪಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.