ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಮನು ಭಾಕರ್
ಪ್ಯಾರಿಸ್: ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಪ್ರಥಮ ಭಾರತೀಯ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಭಾರತದ ಶೂಟರ್ ಮನು ಭಾಕರ್ ಪಾತ್ರರಾಗಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಈಗಾಗಲೇ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿರುವ ಮನು, ಈಗ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲೂ ಇಂದು ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಮನು ಮತ್ತಾಕೆಯ ಶೂಟಿಂಗ್ ಪಾರ್ಟ್‌ನರ್ ಸರ್ಬಜೋತ್ ಸಿಂಗ್ ಜೊತೆಯಾಗಿ ಕೊರಿಯಾದ ವೊನ್ಹೊ ಲೀ ಮತ್ತು ಜಿನ್ ಯೆ ಒಹ್ ಅವರನ್ನು ಸೋಲಿಸಿ ಭಾರತಕ್ಕೆ ತನ್ನ ಎರಡನೇ ಪದಕ ದೊರಕಿಸಿಕೊಟ್ಟಿದ್ದಾರೆ. ಇಂದಿನ ಆಸಕ್ತಿಕರ ಸ್ಪರ್ಧೆಯಲ್ಲಿ ಭಾರತದ ಜೋಡಿ 16-10 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದೆ.
ಮನು ಅವರು 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಭಾಗವಹಿಸಲಿದ್ದು ಅಲ್ಲಿಯೂ ಆಕೆ ಪದಕ ಗೆಲ್ಲುವರೆಂಬ ನಿರೀಕ್ಷೆಯಿದೆ.
ಮಾಜಿ ಯೂತ್ ಒಲಿಂಪಿಕ್ ಚಾಂಪಿಯನ್ 22 ವರ್ಷದ ಮನು ಎರಡು ದಿನಗಳ ಹಿಂದೆ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಸರಬ್ಜೋತ್ ಸಿಂಗ್ ಈ ಹಿಂದೆಯೂ ಭಾರತಕ್ಕೆ ಹಲವು ಬಾರಿ ಕೀರ್ತಿ ತಂದಿದ್ದಾರೆ.
2022 ರ ಏಷ್ಯನ್ ಗೇಮ್ಸ್‌ನಲ್ಲಿ ಸರಬ್ಜೋತ್ ಸಿಂಗ್, ಅರ್ಜುನ್ ಸಿಂಗ್ ಚೀಮಾ ಮತ್ತು ಶಿವ ನರ್ವಾಲ್ ಅವರ ಭಾರತೀಯ ತಂಡ 10 ಮೀ ಏರ್ ಪಿಸ್ತೂಲ್ ನಲ್ಲಿ ಚಿನ್ನದ ಪದಕ ಗೆದ್ದಿತ್ತು.
2022 ರ ಏಷ್ಯನ್ ಗೇಮ್ಸ್ ನಲ್ಲಿ ಸರಬ್ಜೋತ್ ಸಿಂಗ್ ಹಾಗು ದಿವ್ಯಾ ಟಿ.ಎಸ್ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಏಷ್ಯನ್ ಗೇಮ್ಸ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಗೆದಿದ್ದರು.
ಇದಕ್ಕೂ ಮೊದಲು 2021 ರಲ್ಲಿ, ಅವರು ವಿಶ್ವ ಚಾಂಪಿಯನ್‌ಶಿಪ್‌ನ ವೈಯಕ್ತಿಕ ಮತ್ತು ತಂಡದ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದಿದ್ದರು. 2019 ರಲ್ಲಿ, ಅವರು ISSF ಜೂನಿಯರ್ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿದ್ದರು.
ಮನು ಭಾಕರ್ ಈ ಗುಲುವಿನೊಂದಿಗೆ ಹಲವು ಹೊಸ ದಾಖಲೆ ಬರೆದಿದ್ದಾರೆ .
ಒಲಿಂಪಿಕ್ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಮನು ಪಾತ್ರರಾದರು.
ಮನು ಮತ್ತು ಸರಬ್ಜೋತ್ ಸಿಂಗ್ ಒಲಿಂಪಿಕ್ಸ್‌ನಲ್ಲಿ ತಂಡದ ಪದಕ ಗೆದ್ದ ಮೊದಲ ಭಾರತೀಯ ಶೂಟಿಂಗ್ ಜೋಡಿ. ವೈಯಕ್ತಿಕ ಮತ್ತು ತಂಡದ ಸ್ಪರ್ಧೆಗಳಲ್ಲಿ ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಮನು .
ಇಷ್ಟೆಲ್ಲಾ ದಾಖಲೆಗಳನ್ನು ಮನು ಭಾಕರ್ ಬರೆದಿದ್ದಾರೆ.