"ಹಿಂದಿನ ತಪ್ಪನ್ನು ಭವಿಷ್ಯದಲ್ಲಿ ಪುನರಾವರ್ತಿಸುವುದಿಲ್ಲ": ಆಂಗ್ಲ ದೈನಿಕದಲ್ಲಿ ಜಾಹೀರಾತು ಮೂಲಕ ಸಾವರ್ಜನಿಕ ಕ್ಷಮೆಯಾಚಿಸಿದ ಪತಂಜಲಿ

Update: 2024-04-23 06:23 GMT

ಯೋಗಗುರು ರಾಮದೇವ್‌ (Photo: PTI) 

ಹೊಸದಿಲ್ಲಿ: ದಾರಿ ತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸೋಮವಾರ ಪ್ರಮುಖ ಆಂಗ್ಲ ದೈನಿಕದಲ್ಲಿ ಜಾಹೀರಾತು ನೀಡುವ ಮೂಲಕ ಸಾರ್ವಜನಿಕ ಕ್ಷಮೆಯಾಚನೆಯನ್ನು ಪತಂಜಲಿ ಆಯುರ್ವೇದ ಮಾಡಿದೆಯಲ್ಲದೆ ತಾನು ದೇಶದ ಅತ್ಯುನ್ನತ ನ್ಯಾಯಾಲಯ ಮತ್ತು ಸಂವಿಧಾನವನ್ನು ಎತ್ತಿ ಹಿಡಿಯುವುದಾಗಿ ಸುಪ್ರೀಂ ಕೋರ್ಟ್‌ಗೆ ಹೇಳಿದೆ.

ತಮ್ಮ ವಕೀಲರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ನಂತರವೂ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕೆ ಹಾಗೂ ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ರಾಮದೇವ್‌ ಕ್ಷಮೆಯಾಚಿಸಿದ್ದಾರೆ.

ಸುಪ್ರೀಂ ಕೋರ್ಟಿನಿಂದ ಪತಂಜಲಿ ಸ್ಥಾಪಕರಾದ ಯೋಗಗುರು ರಾಮದೇವ್‌ ಮತ್ತು ಆಚಾರ್ಯ ಬಾಲಕೃಷ್ಣ ತರಾಟೆಗೆ ಒಳಗಾಗದ ನಂತರ ಈ ಸಾರ್ವಜನಿಕ ಕ್ಷಮಾಪಣೆ ಬಂದಿದೆ.

ಹಿಂದಿನ ತಪ್ಪನ್ನು ಭವಿಷ್ಯದಲ್ಲಿ ಪುನರಾವರ್ತಿಸುವುದಿಲ್ಲ ಎಂದು ʼದಿ ಇಂಡಿಯನ್‌ ಎಕ್ಸ್‌ಪ್ರೆಸ್‌ʼ ಪತ್ರಿಕೆಗೆ ನೀಡಿದ ಜಾಹೀರಾತಿನಲ್ಲಿ ಪತಂಜಲಿ ತಿಳಿಸಿದೆ.

ಕಳೆದ ವಿಚಾರಣ ವೇಳೆ ಸುಪ್ರೀಂ ಕೋರ್ಟ್‌ ಪತಂಜಲಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಒಂದು ವಾರ ಕಾಲಾವಕಾಶ ನೀಡಿತ್ತಲ್ಲದೆ ತಪ್ಪುಗಳನ್ನು ಸರಿಪಡಿಸಲು ಮತ್ತು ಬದ್ಧತೆಯನ್ನು ಮುಂದಿನ ವಿಚಾರಣಾ ದಿನಾಂಕವಾದ ಎಪ್ರಿಲ್‌ 23ರೊಳಗೆ ಪ್ರದರ್ಶಿಸಬೇಕೆಂದು ಸೂಚಿಸಿತ್ತು.

ಪತಂಜಲಿ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸುತ್ತಿದೆ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಯ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದು ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿದ ಪ್ರಕರಣ ಇದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News