ಗೃಹಿಣಿಯ ಸಾವಿನ ನಂತರ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತವು ಆಕೆ ನೀಡಿದ್ದ ಪ್ರೀತಿ, ಆರೈಕೆಗೆ ಸಮನಾಗದು: ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಗೃಹಿಣಿಯೊಬ್ಬರ ಸಾವಿನ ನಂತರ ಕುಟುಂಬ ಸದಸ್ಯರಿಗೆ ನೀಡಲಾಗುವ ಪರಿಹಾರದ ಯಾವುದೇ ಮೊತ್ತವು ಆಕೆ ಕುಟುಂಬಕ್ಕೆ ನೀಡಿದ್ದ ಪ್ರೀತಿ, ಆರೈಕೆಗೆ ಸಮನಾಗದು ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ರೂ. 17.38 ಲಕ್ಷ ಪಾವತಿಸಬೇಕೆಂದು ವಾಹನ ಅಪಘಾತಗಳ ಕ್ಲೇಮ್ಸ್ ಟ್ರಿಬ್ಯುನಲ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪೆನಿಯೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ದಿಲ್ಲಿ ಹೈಕೋರ್ಟಿನ ಜಸ್ಟಿಸ್ ಗೌರಂಗ್ ಕಾಂತ್ ಮೇಲಿನಂತೆ ಹೇಳಿದ್ದಾರೆ.
ಆದಾಯ ಮತ್ತು ಶಿಕ್ಷಣದ ಪುರಾವೆಯಿಲ್ಲದೆ ಗೃಹಿಣಿಯೊಬ್ಬರ ಆದಾಯವನ್ನು ಕನಿಷ್ಠ ವೇತನಗಳ ಕಾಯಿದೆಯಡಿ ತಿಳಿಯಲಾಗುವುದಿಲ್ಲ ಎಂದು ವಿಮಾ ಕಂಪೆನಿ ವಾದಿಸಿತ್ತು. ಅಷ್ಟೇ ಅಲ್ಲದೆ ಈ ಪ್ರಕರಣದಲ್ಲಿ ಗೃಹಿಣಿಯ ವೇತನವನ್ನು ಲೆಕ್ಕ ಹಾಕುವಲ್ಲಿ ಟ್ರಿಬ್ಯುನಲ್ ತಪ್ಪು ಮಾಡಿದೆ ಎಂದು ವಿಮಾ ಕಂಪೆನಿ ವಾದಿಸಿತ್ತಲ್ಲದೆ ವೈಯಕ್ತಿಕ ಖರ್ಚುಗಳಿಗೆ ಯಾವುದೇ ಮೊತ್ತವನ್ನು ಕಡಿತಗೊಳಿಸದೆ ಅಂದಾಜಿಸಿದ ಆದಾಯಕ್ಕೆ ಶೇ25ರಷ್ಟು ಟ್ರಿಬ್ಯುನಲ್ ಸೇರಿಸಿತ್ತು ಎಂದು ಕಂಪೆನಿ ಹೇಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಜಸ್ಟಿಸ್ ಕಾಂತ್, ಟ್ರಿಬ್ಯುನಲ್‌ಗಳು ಮತ್ತು ನ್ಯಾಯಾಲಯಗಳು ಎಷ್ಟೇ ಪರಿಣತಿಯಿಂದ ಲೆಕ್ಕ ಹಾಕಿದರೂ ಗೃಹಿಣಿಯೊಬ್ಬರ ಆದಾಯವನ್ನು ಆಕೆ ಕುಟುಂಬಕ್ಕೆ ಒದಗಿಸುವ ಪ್ರೀತಿ, ಆರೈಕೆ ಮತ್ತು ಸೇವೆಯನ್ನು ಪರಿಗಣಿಸಿದಾಗ ನಿಖರವಾಗಿ ಲೆಕ್ಕ ಹಾಕಲಾಗದು, ಪರಿಹಾರ ಮೊತ್ತ ಆರ್ಥಿಕವಾಗಿ ಸಹಾಯ ಮಾಡಬಹುದು ಆದರೆ ತಾಯಿ ಅಥವಾ ಪತ್ನಿ ಕುಟುಂಬಕ್ಕೆ ನೀಡಿದ ಸೇವೆಗೆ ಸರಿಗಟ್ಟದು ಎಂದು ನ್ಯಾಯಾಲಯ ಹೇಳಿತಲ್ಲದೆ ಕುಟುಂಬಕ್ಕೆ ರೂ 15.95 ಲಕ್ಷ ಪರಿಹಾರವೊದಗಿಸುವಂತೆ ವಿಮಾ ಕಂಪೆನಿಗೆ ಆದೇಶಿಸಿದೆ.