ತಿಂಗಳ ಕಾಲ 'ಡಿಜಿಟಲ್ ಬಂಧನ': ರೂ. 3.8 ಕೋಟಿ ಕಳೆದುಕೊಂಡ ವೃದ್ಧೆ

Update: 2024-11-26 15:04 GMT

PC: freepik

ಮುಂಬೈ: ಕಾನೂನು ಜಾರಿ ಅಧಿಕಾರಿಗಳು ಎಂಬ ಸೋಗಿನಲ್ಲಿ 77 ವರ್ಷದ ವೃದ್ಧೆಯೊಬ್ಬರನ್ನು 'ಡಿಜಿಟಲ್ ಬಂಧನ'ಕ್ಕೆ ಒಳಪಡಿಸಿದ ವಂಚಕರು ಆಕೆಯಿಂದ 3.8 ಕೋಟಿ ರೂಪಾಯಿ ಲಪಟಾಯಿಸಿರುವ ಪ್ರಕರಣ ದಕ್ಷಿಣ ಮುಂಬೈನಲ್ಲಿ ನಡೆದಿದೆ. ವೃದ್ಧೆಯನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಡಿಜಿಟಲ್ ಬಂಧನದಲ್ಲಿ ಇರಿಸಲಾಗಿತ್ತು. ನಕಲಿ ಹಣ ದುರುಪಯೋಗ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಕೆ ಹಾಕಿ ಆರೋಪಿಗಳು 3.8 ಕೋಟಿ ರೂಪಾಯಿಯನ್ನು ಈಕೆಗೆ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದೂರು ನೀಡಿದ ಮಹಿಳೆ ಗೃಹಿಣಿಯಾಗಿದ್ದು, ನಿವೃತ್ತ ಪತಿ ಜತೆ ನಗರದಲ್ಲಿ ವಾಸವಿದ್ದಾರೆ. ಇಬ್ಬರು ಮಕ್ಕಳು ವಿದೇಶಗಳಲ್ಲಿದ್ದಾರೆ. ವೃದ್ಧೆಗೆ ಮೊದಲು ವಾಟ್ಸಪ್ ಕರೆ ಬಂದಿದೆ. ನೀವು ತೈವಾನ್ ಗೆ ಕಳುಹಿಸಿದ ಪಾರ್ಸೆಲ್ ತಡೆಹಿಡಿಯಲಾಗಿದ್ದು, ಇದರಲ್ಲಿ ಐದು ಪಾಸ್ಪೋರ್ಟ್, ಒಂದು ಬ್ಯಾಂಕ್ ಕಾರ್ಡ್, 4 ಜೆ.ಜಿ. ಬಟ್ಟೆ ಹಾಗೂ ಎಂಡಿಎಂಎ ಡ್ರಗ್ ಇದೆ ಎಂದು ವಂಚಕರು ಹೇಳಿದ್ದರು. ತಾನು ಯಾರಿಗೂ ಪಾರ್ಸೆಲ್ ಕಳುಹಿಸಿಲ್ಲ ಎಂದು ವೃದ್ಧೆ ತಿಳಿಸಿದ್ದರು. ಆದರೆ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಈ ಅಪರಾಧಕ್ಕೆ ಬಳಸಿಕೊಳ್ಳಲಾಗಿದ್ದು, ಮುಂಬೈ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡುವಂತೆ ಸೂಚಿಸಿದ್ದಾರೆ. ನಕಲಿ ಪೊಲೀಸ್ ಅಧಿಕಾರಿಗೆ ಕರೆ ವರ್ಗಾವಣೆ ಮಾಡಲಾಗಿದ್ದು, ಆಧಾರ್ ಕಾರ್ಡ್ ನಕಲಿ ಹಣ ವಂಚನೆ ಪ್ರಕರಣದ ಜತೆ ಸಂಬಂಧ ಹೊಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬೆದರಿಕೆ ಹಾಕಿದ್ದರು. ಆದರೆ ವೃದ್ಧೆ ಇದನ್ನು ನಿರಾಕರಿಸಿದ್ದರು.

ಬಳಿಕ ಆಕೆಗೆ ಸ್ಕೈಪ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಸೂಚಿಸಿ ಆ ಮೂಲಕ ಮಾತುಕತೆ ನಡೆಸುವಂತೆ ಕೇಳಲಾಯಿತು. ಈ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ಆದೇಶಿಸಲಾಯಿತು. ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡ ಆನಂದ್ ರಾಣಾ ಎಂಬ ವ್ಯಕ್ತಿ ಆಕೆಯ ಬ್ಯಾಂಕ್ ವಿವರಗಳನ್ನು ಕೇಳಿದ್ದಾನೆ. ಬಳಿಕ ಜಾರ್ಜ್ ಮ್ಯಾಥ್ಯೂ ಹೆಸರಿನ ಮತ್ತೊಬ್ಬ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡ ಹಣಾಸು ವಿಭಾಗದ ಅಧಿಕಾರಿ ತನ್ನ ಖಾತೆಗೆ ಹಣ ವರ್ಗಾಯಿಸುವಂತೆ ಸೂಚಿಸಿ ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದ. ಈ ಆರೋಪದಿಂದ ಮುಕ್ತರಾದರೆ ಹಣ ಮರಳಿಸುವುದಾಗಿ ನಂಬಿಸಿದ್ದರು. ಅರೋಪಿಗಳು ಮುಂಬೈ ಅಪರಾಧ ವಿಭಾಗದಿಂದ ನಕಲಿ ನೋಟಿಸ್ ಕಳುಹಿಸಿದ್ದು, ಇದರಲ್ಲಿ ಪೊಲೀಸ್ ಲಾಂಛನವೂ ಇದೆ.

ಮೊದಲು ಮಹಿಳೆ 15 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದು, ಇದನ್ನು ಅರೋಪಿಗಳು ವಾಪಾಸು ಕಳುಹಿಸಿದ್ದಾರೆ. ಈ ಮೂಲಕ ಆಕೆಯ ವಿಶ್ವಾಸ ಗಳಿಸಿಕೊಂಡು, ಮಹಿಳೆಯ ಹಾಗೂ ಪತಿಯ ಜಂಟಿ ಖಾತೆಯಲ್ಲಿದ್ದ ಎಲ್ಲ ಹಣ ವರ್ಗಾಯಿಸುವಂತೆ ಕೇಳಿದ್ದಾರೆ. ಒಟ್ಟು 3.8 ಕೋಟಿ ರೂಪಾಯಿಯನ್ನು ಆರು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News