ತಾಯಿ, ಅಜ್ಜನ ಹತ್ಯೆ: ತಂದೆಯ ವಿರುದ್ಧ ಸಾಕ್ಷಿ ಹೇಳಿದ ಬಾಲಕಿ
ಚೆನ್ನೈ: ತಾಯಿ ಮತ್ತು ಅಜ್ಜನನ್ನು ಹೇಗೆ ತಂದೆ ಬರ್ಬರವಾಗಿ ಹತ್ಯೆ ಮಾಡಿದ್ದರು ಎಂಬ ಘಟನೆಯನ್ನು ಒಂಬತ್ತು ವರ್ಷದ ಬಾಲಕಿ ನ್ಯಾಯಾಧೀಶರ ಮುಂದೆ ಕಣ್ಣಿಗೆ ಕಟ್ಟುವಂತೆ ವಿವರಿಸಿದ ಅಪರೂಪದ ಘಟನೆಗೆ ಚೆನ್ನೈ ಕೋರ್ಟ್ ಆವರಣ ಸಾಕ್ಷಿಯಾಯಿತು. ಬಾಲಕಿಯ ಸಾಕ್ಷಿಯ ಆಧಾರದಲ್ಲಿ ಆರೋಪಿ ಅಬ್ದುಲ್ ಖಾದರ್ ಎಂಬಾತನಿಗೆ ಈ ಅವಳಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಚೆನ್ನೈ ಮಹಿಳಾ ಕೋರ್ಟ್ ನಲ್ಲಿ ವಿಚಾರಣೆಯ ಅಂತಿಮ ದಿನ ಹಾಜರಾದ ಬಾಲಕಿ, ತಾಯಿ ಗೌಸುನ್ನೀಸಾ ಮತ್ತು ಅಜ್ಜ ಮುಸಾಫರ್ ಅವರನ್ನು ತನ್ನ ತಂದೆ ಹೇಗೆ ಬಿಯರ್ ಬಾಟಲಿಯಿಂದ ಚುಚ್ಚಿ, ಕುಕ್ಕರ್ ನಿಂದ ಹೊಡೆದು ಹೇಗೆ ಸಾಯಿಸಿದರು ಎನ್ನುವುದನ್ನು ವಿವರಿಸಿದಳು.
ಈ ಹತ್ಯೆ ಪ್ರಕರಣ 2021ರ ಮೇ 8ರಂದು ವರದಿಯಾಗಿದ್ದು, ರೋಯಪೆಟ್ಟ ಎಂಬಲ್ಲಿ ಪತಿ ಖಾದರ್ (53) ಎಂಬುವವರಿಂದ ಪರಿತ್ಯಕ್ತರಾದ ಬಳಿಕ ಗೌಸುನ್ನೀಸಾ ತನ್ನ ಪುತ್ರಿ ಹಾಗೂ ತಂದೆಯ ಜತೆ ವಾಸವಿದ್ದರು.
ಮೊದಲ ಪತಿಗೆ ಗೌಸುನ್ನೀಸಾ ವಿಚ್ಛೇದನ ನೀಡಿದ ಬಳಿಕ ಖಾದರ್ ಜತೆ ವಿವಾಹವಾಗಿದ್ದರು. ಈ ದಂಪತಿಗೆ ಹೆಣ್ಣುಮಗು ಹುಟ್ಟಿದ್ದು, ಪ್ರತಿದಿನ ಜಗಳದ ಕಾರಣದಿಂದಾಗಿ ಪತಿಯ ಮನೆ ತೊರೆದು ಗೌಸುನ್ನೀಸಾ ಪ್ರತ್ಯೇಕವಾಗಿ ವಾಸವಿದ್ದರು. ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ ಬಳಿಕ, ಮೊದಲ ವಿವಾಹದಿಂದ ಹುಟ್ಟಿದ್ದ ಪುತ್ರಿ ಕೂಡಾ ಜತೆಗೆ ಇದ್ದಳು. ಪದೇ ಪದೇ ಖಾದರ್ ಈ ಮನೆಗೂ ಭೇಟಿ ನೀಡಿ ಜಗಳವಾಡುತ್ತಿದ್ದ. ಇದರಿಂದಾಗಿ ಮಗುವನ್ನು ಭೇಟಿ ಮಾಡದಂತೆ ಗೌಸುನ್ನೀಸಾ ತಾಕೀತು ಮಾಡಿದ್ದರು.
ಕೃತ್ಯ ಎಸಗಿದ ದಿನ ಗೌಸುನ್ನೀಸಾ ಅವರ ಹಿರಿಯ ಪುತ್ರಿ ಕೆಲಸಕ್ಕೆ ಹೋಗಿದ್ದಾಗ ಮನೆಗೆ ಬಂದ ಖಾದರ್, ಗೌಸುನ್ನೀಸಾ ಹಾಗೂ ಮುಸಾಫರ್ ಅವರ ಮೇಲೆ ಹಲ್ಲೆ ನಡೆಸಿದ್ದ. ಪುಟ್ಟ ಬಾಲಕಿ ಮಧ್ಯಪ್ರವೇಶಿಸಿ ತಡೆಯಲು ಯತ್ನಿಸಿದಾಗ ಆಕೆಯ ತಲೆಯನ್ನು ಗೋಡೆಗೆ ಚಚ್ಚಿದ್ದ ಎಂದು ಆಪಾದಿಸಲಾಗಿದೆ.