ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ | ಸಂತ್ರಸ್ತೆಯ ಪೋಷಕರಿಗೆ ಕೋಲ್ಕತ್ತಾ ಪೊಲೀಸರು ಆಮಿಷವೊಡ್ಡುತ್ತಿದ್ದಾರೆ ಎಂಬ ಆರೋಪ ಅಲ್ಲಗಳೆದ ಸಂಸದ ಸಾಕೇತ್ ಗೋಖಲೆ

Update: 2024-09-05 06:37 GMT

Photo : PTI

ಕೋಲ್ಕತ್ತಾ : ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ ತರಬೇತಿ ನಿರತ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಮಾಧ್ಯಮಗಳು ಮಾಡುತ್ತಿರುವ ವರದಿಗಳನ್ನು ಅಲ್ಲಗಳೆದಿರುವ ಟಿಎಂಸಿ ಸಂಸದ ಸಾಕೇತ್ ಗೋಖಲೆ, ನಿರ್ದಿಷ್ಟ ಮಾಧ್ಯಮ ಸಂಸ್ಥೆಗಳು ರಾಜಕೀಯ ಕಾರ್ಯಸೂಚಿಯನ್ನು ಮುನ್ನೆಲೆಗೆ ತರಲು ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಾಕೇತ್ ಗೋಖಲೆ, “ಮತ್ತೆ ದಾರಿ ತಪ್ಪಿಸುವ ನಕಲಿ ಸುದ್ದಿ. ಈ ವರದಿಗಳನ್ನು ಸಂತ್ರಸ್ತೆಯ ಪೋಷಕರು ವಿಡಿಯೊವೊಂದರಲ್ಲಿ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಹೀಗಾಗಿ, ಶೇಖರ್ ಗುಪ್ತ ಮತ್ತೊಬ್ಬರಿಂದ ಹೇಳಿಕೆ ಪಡೆದು, ಅವರು ಸಂತ್ರಸ್ತೆಯ ಕುಟುಂಬದ ಸದಸ್ಯರು ಎಂದು ಹೇಳುತ್ತಿದ್ದಾರೆ. ಯಾರು ಹೆಚ್ಚು ವಿಶ್ವಾಸಾರ್ಹರು? ಪೋಷಕರು? ಅಥವಾ ಕುಟುಂಬದ ಸದಸ್ಯರು? ಬಿಜೆಪಿಯ ನಕಲಿ ಕಾರ್ಯಸೂಚಿಯನ್ನು ಹರಡಲು ಹೊಸ ವಂಚಕ ಪದಗಳ ಆಟ” ಎಂದು ಟೀಕಿಸಿದ್ದಾರೆ.

ತಮ್ಮ ಪುತ್ರಿಯ ಮೃತದೇಹವು ಮನೆಯಲ್ಲಿರುವಾಗಲೇ ಶೋಕತಪ್ತರಾಗಿದ್ದ ತಮಗೆ ಕೋಲ್ಕತ್ತಾ ಪೊಲೀಸರು ಹಣದ ಆಮಿಷವೊಡ್ಡಿದ್ದರು ಎಂದು ಸಂತ್ರಸ್ತೆಯ ಕುಟುಂಬದ ಸದಸ್ಯರು ಹೇಳಿದ್ದಾರೆ ಎಂಬ ವರದಿಗಳು ಪ್ರಕಟಗೊಂಡ ನಂತರ, ಸಾಕೇತ್ ಗೋಖಲೆಯವರಿಂದ ಈ ಹೇಳಿಕೆ ಹೊರ ಬಿದ್ದಿದೆ. ಸಂತ್ರಸ್ತೆಯ ಪೋಷಕರು ಇಂತಹ ಹೇಳಿಕೆ ನೀಡಿರುವುದನ್ನು ನಿರಾಕರಿಸಿದ್ದಾರೆ ಎಂದು ಪ್ರತಿಪಾದಿಸಿರುವ ಗೋಖಲೆ, ಇಂತಹ ಆರೋಪಗಳ ವಿಶ್ವಾಸಾರ್ಹತೆ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ ಹಾಗೂ ಈ ವರದಿಗಳ ಮಾಧ್ಯಮ ಮೂಲಗಳ ಕುರಿತು ಪ್ರಶ್ನೆಯೆತ್ತಿದ್ದಾರೆ.

ಆಗಸ್ಟ್ 9, 2024ರಂದು ಸರಕಾರಿ ಆಸ್ಪತ್ರೆಯಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ 31 ವರ್ಷದ ತರಬೇತಿ ನಿರತ ವೈದ್ಯೆಯ ಹತ್ಯೆಯು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಈ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News