'ಪ್ರಾಚೀನ' ಹಿಂದೂ ದೇವಾಲಯ ಬಳಿ ತಮ್ಮದೇ ಮನೆ ಕೆಡವಿದ ಮುಸ್ಲಿಮರು!

Update: 2024-12-18 04:50 GMT

PC: screengrab/x.com/FrontalForce

ಬರೇಲಿ: ಕಳೆದ ವಾರ 'ಪ್ರಾಚೀನ' ಮಂದಿರ ಪತ್ತೆಯಾದ ಸಂಭಲ್ ಪ್ರದೇಶದ ಮುಸ್ಲಿಂ ನಿವಾಸಿಗಳು "ದೇವಸ್ಥಾನ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದು" ಎನ್ನಲಾದ ತಮ್ಮ ಮನೆಗಳನ್ನು ಸ್ವಯಂಪ್ರೇರಿತರಾಗಿ ಸ್ವತಃ ತಾವೇ ಕೆಡವಲು ಆರಂಭಿಸಿದ್ದಾರೆ. ಈ ಪ್ರದೇಶದಲ್ಲಿ ಜಿಲ್ಲಾಡಳಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ವ್ಯಾಪಕವಾಗಿ ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದೆ ಎಂದು Times of India ವರದಿ ಮಾಡಿದೆ.

"ಈ ಮೂಲಕ ನಾವು ಕನಿಷ್ಠ ನಮ್ಮ ಅಮೂಲ್ಯ ವಸ್ತುಗಳನ್ನು ರಕ್ಷಿಸಿಕೊಳ್ಳಬಹುದು. ಆಡಳಿತ ಯಂತ್ರಕ್ಕೆ ಧ್ವಂಸಕ್ಕೆ ಅವಕಾಶ ಮಾಡಿಕೊಟ್ಟರೆ, ನಮಗೆ ಏನೂ ಉಳಿಯುವುದಿಲ್ಲ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿವಾಸಿಯೊಬ್ಬರು ಹೇಳಿದರು.

ಸಂಭಲ್ ನ ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಉತ್ತರ ಪ್ರದೇಶ ವಿದ್ಯುತ್ ನಿಗಮ ದಾಳಿಗಳನ್ನು ಮುಂದುವರಿಸಿರುವ ನಡುವೆಯೇ ಈ ಬೆಳವಣಿಗೆ ವರದಿಯಾಗಿದೆ. ಮಂಗಳವಾರ ಸಮಾಜವಾದಿ ಪಕ್ಷದ ಸಂಸದ ಝಿಯಾಉರ್ರಹ್ಮಾನ್ ಅವರ ನಿವಾಸಕ್ಕೆ ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ. ಅವರ ಹೆಸರಿನಲ್ಲಿ ಅಕ್ರಮ ನಿರ್ಮಾಣ ಮಾಡಿದ ಆರೋಪದಲ್ಲಿ ಅವರಿಗೆ ಕಳೆದ ವಾರ ನೋಟಿಸ್ ನೀಡಲಾಗಿತ್ತು.

ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯವು ನ್ಯಾಯಾಲಯ ಆದೇಶದಂತೆ ಜಾಮಾ ಮಸೀದಿಯ ಸಮೀಕ್ಷೆ ಕಾರ್ಯಕ್ಕೆ ಮುಂದಾದಾಗ ನವೆಂಬರ್ 24ರಂದು ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ ಐದು ಮಂದಿ ಮೃತಪಟ್ಟು 20 ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು. ಆ ಬಳಿಕ ಒತ್ತುವರಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿತ್ತು. ಮೊಘಲರ ಅವಧಿಯಲ್ಲಿ ದಾಳಿಗೊಳಗಾದ ದೇವಸ್ಥಾನದ ಅವಶೇಷಗಳ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂಬ ಆರೋಪದಲ್ಲಿ ಸಮೀಕ್ಷೆಗೆ ಆದೇಶಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News