ಮುಸ್ಲಿಮರ ವಿರುದ್ಧ ಧ್ವೇಷದ ಹೇಳಿಕೆ: ಅಲಹಾಬಾದ್ ನ್ಯಾಯಾಧೀಶರಿಗೆ ಸುಪ್ರೀಂ ಕೊಲಿಜಿಯಂ ಹೇಳಿದ್ದೇನು?
ಹೊಸದಿಲ್ಲಿ: ಇತ್ತೀಚೆಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆಯಿಂದ ದೂರವಿರಬಹುದಿತ್ತು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರಿಗೆ ಹೇಳಿರುವುದಾಗಿ The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೆ, 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ನಿಖರವಾಗಿ ಏನು ನಡೆಯಿತೆಂಬ ವಿವರಗಳಿನ್ನೂ ಲಭ್ಯವಾಗಿಲ್ಲ ಎಂದೂ ವರದಿಯಾಗಿದೆ. ಈ ನಡುವೆ, ಎಲ್ಲರ ಕಣ್ಣು ರಾಜ್ಯಸಭಾಧ್ಯಕ್ಷರ ಮೇಲಿದ್ದು, ವಿರೋಧ ಪಕ್ಷಗಳು ನ್ಯಾ. ಶೇಖರ್ ಕುಮಾರ್ ಯಾದವ್ ವಿರುದ್ಧ ದ್ವೇಷ ಭಾಷಣ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನದ ಆರೋಪ ಹೊರಿಸಿ, ವಾಗ್ದಂಡನೆ ನೋಟಿಸ್ ನೀಡಿವೆ.
ಡಿಸೆಂಬರ್ 8ರಂದು ವಿಶ್ವ ಹಿಂದೂ ಪರಿಷತ್ ನ ಕಾನೂನು ಘಟಕ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ್ದ ನ್ಯಾ. ಶೇಖರ್ ಕುಮಾರ್ ಯಾದವ್, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು. ಅಲ್ಲದೆ, ಸಮಾನ ನಾಗರಿಕ ಸಂಹಿತೆಯನ್ನು ಹಿಂದೂ ಮತ್ತು ಮುಸ್ಲಿಮರ ನಡುವಿನ ಚರ್ಚೆ ಎಂದು ವ್ಯಾಖ್ಯಾನಿಸಿದ್ದ ಅವರು, ಈ ಕಾಯ್ದೆಯಲ್ಲಿ ಹಿಂದೂಗಳಿಗೆ ಸುಧಾರಣೆ ತರಲಾಗಿದ್ದರೆ, ಮುಸ್ಲಿಮರಿಗೆ ಯಾವುದೇ ಸುಧಾರಣೆಯನ್ನು ಜಾರಿಗೊಳಿಸಿಲ್ಲ ಎಂದು ಆರೋಪಿಸಿದ್ದರು.
“ಇದು ಹಿಂದೂಸ್ತಾನ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಮತ್ತು ಹಿಂದೂಸ್ತಾನದಲ್ಲಿ ವಾಸಿಸುವ ಬಹುಸಂಖ್ಯಾತರ ಪ್ರಕಾರ ದೇಶವು ನಡೆಯುತ್ತದೆ. ಕಾನೂನು ಬಹುಸಂಖ್ಯಾತರ ಇಚ್ಛೆಯ ಮೇಲೆ ಕಾರ್ಯನಿರ್ವಹಿಸುತ್ತದೆ" ಎಂದು ಅವರು ಹೇಳಿದ್ದರು.
ಮುಸ್ಲಿಮರ ವಿರುದ್ಧ ವಾಗ್ದಾಳಿ ನಡೆಸಿದ್ದ ನ್ಯಾಯಾಧೀಶ, “ನಮಗೆ ಇರುವೆಯನ್ನು ಸಹ ಕೊಲ್ಲಬಾರದು ಎಂದು ಕಲಿಸಲಾಗಿದೆ. ಅದಕ್ಕಾಗಿಯೇ ನಾವು ಸಹಿಷ್ಣುತೆ ಮತ್ತು ಉದಾರರಾಗಿದ್ದೇವೆ. ನಿಮ್ಮಲ್ಲಿ ಪ್ರಾಣಿ ವಧೆಯನ್ನು ಮಾಡಲಾಗುತ್ತದೆ” ಎಂದು ಹೇಳಿದ್ದರು.