“ನೀವೆಲ್ಲಿರುತ್ತೀರೊ ಅಲ್ಲೇ ನನ್ನ ಹಬ್ಬ”: ಪ್ರಧಾನಿ ಮೋದಿ

Update: 2023-11-12 17:14 GMT

Photo : PTI 

ಲೆಪ್ಚಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದಲ್ಲಿನ ಲೆಪ್ಚಾದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ದೀಪಾವಳಿಯನ್ನು ಸೇನಾ ಪಡೆಯೊಂದಿಗೆ ಆಚರಿಸಿದರು. ಈ ಸಂದರ್ಭದಲ್ಲಿ ಸೇನಾ ಪಡೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ ಗಡಿಯಲ್ಲಿ ನಮ್ಮ ಸೇನೆಯು ಎಲ್ಲಿಯವರೆಗೆ ದೃಢವಾಗಿ ಮತ್ತು ಕದಲಿಸಲು ಸಾಧ್ಯವಾಗದ ಹಿಮಾಲಯದಂತೆ ನಿಂತಿರುತ್ತದೊ, ಅಲ್ಲಿಯವರೆಗೆ ಭಾರತವು ಸುರಕ್ಷಿತವಾಗಿರುತ್ತದೆ” ಎಂದು ಹೇಳಿದರು ಎಂದು indiatoday.in ವರದಿ ಮಾಡಿದೆ.

ವಿಶ್ವಾದ್ಯಂತ ತೀವ್ರ ಬಿಕ್ಕಟ್ಟುಗಳಿರುವ ಸಂದರ್ಭದಲ್ಲಿ ದೇಶದ ಗಡಿಗಳನ್ನು ರಕ್ಷಿಸುತ್ತಿರುವ ಸೇನಾಪಡೆಗಳ ಪಾತ್ರವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. “ ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತದ ಮೇಲಿನ ನಿರೀಕ್ಷೆಯು ನಿರಂತರವಾಗಿ ಮುಂದುವರಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಗಡಿಗಳು ಸುರಕ್ಷಿತವಾಗಿ ಉಳಿಯುವುದು ಅಗತ್ಯವಾಗಿದೆ. ದೇಶದಲ್ಲಿ ನಾವು ಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತಿದ್ದು, ಇದರಲ್ಲಿ ನಿಮ್ಮ ಪಾತ್ರ ಹಿರಿದಾಗಿದೆ” ಎಂದು ಸೇನಾಪಡೆಗಳನ್ನುದ್ದೇಶಿಸಿ ಅವರು ಹೇಳಿದರು.

ದೇಶದ ನಿರ್ಮಾಣಕ್ಕೆ ಭಾರತದ ಸೇನಾಪಡೆ ಹಾಗೂ ಭದ್ರತಾ ಪಡೆಗಳು ನಿರಂತರವಾಗಿ ಕೊಡುಗೆ ನೀಡಿವೆ ಎಂದೂ ಅವರು ಪ್ರಶಂಸಿಸಿದರು.

ಸೇನಾಪಡೆಗಳ ಯೋಧರೊಂದಿಗೆ ದೀಪಾವಳಿಯನ್ನು ಆಚರಿಸುವ ತಮ್ಮ ಸಂಪ್ರದಾಯದ ಕುರಿತು ಉಲ್ಲೇಖಿಸಿದ ಪ್ರಧಾನಿ ಮೋದಿ, ನಾನು ಈ ಸಂಪ್ರದಾಯವನ್ನು ಕಳೆದ 30-35 ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದೇನೆ. ನಾನು ಈ ಸಂಪ್ರದಾಯವನ್ನು ಗುಜರಾತ್ ನ ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯಾಗುವುದಕ್ಕೆ ಮುಂಚಿನಿಂದಲೂ ಪಾಲಿಸಿಕೊಂಡು ಬರುತ್ತಿದ್ದೇನೆ ಎಂದು ಸ್ಮರಿಸಿದರು.

ಸೇನಾಪಡೆಗಳು ದೀಪಾವಳಿಯನ್ನು ತಮ್ಮ ಕುಟುಂಬಗಳಿಂದ ದೂರ ಆಚರಿಸುತ್ತಿರುವುದನ್ನೂ ಶ್ಲಾಘಿಸಿದ ಅವರು, “ಕುಟುಂಬ ಎಲ್ಲಿರುತ್ತದೊ ಅಲ್ಲಿ ಹಬ್ಬ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಇಂದು ನೀವೆಲ್ಲ ನಿಮ್ಮ ಕುಟುಂಬದಿಂದ ದೂರದಲ್ಲಿರುವ ಗಡಿಗಳಲ್ಲಿ ನಿಯೋಜಿತಗೊಂಡಿದ್ದೀರಿ. ಇದು ನಿಮ್ಮ ಕರ್ತವ್ಯದೆಡೆಗಿನ ಅರ್ಪಣಾ ಮನೋಭಾವವನ್ನು ತೋರಿಸುತ್ತದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನನಗೆ ಸೇನಾಪಡೆಗಳು ನಿಯೋಜಿತಗೊಂಡಿರುವ ಸ್ಥಳಗಳು ದೇವಾಲಯಕ್ಕಿಂತ ಕಡಿಮೆ ಅಲ್ಲ ಎಂದೂ ಅವರು ಹೇಳಿದರು.

ಈಗ ಭಾರತವು ಜಾಗತಿಕ ರಕ್ಷಣಾ ವಲಯವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದು, ಇದು ದೇಶದ ರಕ್ಷಣಾ ಅಗತ್ಯಗಳನ್ನು ಮಾತ್ರವಲ್ಲದೆ ಸ್ನೇಹಿತ ರಾಷ್ಟ್ರಗಳ ಅಗತ್ಯವನ್ನೂ ಪೂರೈಸುತ್ತಿದೆ. 2016ರಲ್ಲಿನ ದೀಪಾವಳಿಯಿಂದ ಈ ವರ್ಷದ ದೀಪಾವಳಿಯವರೆಗೆ ಭಾರತದ ರಕ್ಷಣಾ ಸಾಮಗ್ರಿಗಳ ರಫ್ತು ಎಂಟು ಪಟ್ಟು ವೃದ್ಧಿಸಿದ್ದರೆ, ಸ್ವದೇಶಿ ರಕ್ಷಣಾ ಉತ್ಪಾದನೆಯೀಗ ರೂ. 1 ಲಕ್ಷ ಕೋಟಿಯಷ್ಟಾಗಿದೆ ಎಂದೂ ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News