ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಆರೋಪಿಗಳ ಖುಲಾಸೆ
ಪುಣೆ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಇಂದು ಪುಣೆ ನ್ಯಾಯಾಲಯವು ಇಬ್ಬರನ್ನು ದೋಷಿಗಳೆಂದು ಘೋಷಿಸಿದೆ ಹಾಗೂ ಮೂವರನ್ನು ಖುಲಾಸೆಗೊಳಿಸಿದೆ.
ದೋಷಿಗಳೆಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟವರಾದ ಸಚಿನ್ ಅಂದೂರೆ ಹಾಗೂ ಶರದ್ ಕಲಸ್ಕರ್‌ಗೆ ಜೀವಾವಧಿ ಶಿಕ್ಷೆ ಹಾಗೂ ರೂ 5 ಲಕ್ಷ ದಂಡ ವಿಧಿಸಲಾಗಿದೆ. ಡಾ ವೀರೇಂದ್ರ ಸಿಂಗ್ ತಾವಡೆ, ವಿಕ್ರಮ್ ಭಾವೆ ಮತ್ತು ಸಂಜೀವ್ ಪುನಲೇಕರ್ ಅವರನ್ನು ಖುಲಾಸೆಗೊಳಿಸಿದೆ.
ಸುಮಾರು ಮೂರು ವರ್ಷಗಳ ವಿಚಾರಣೆಯ ನಂತರ ಸೆಷನ್ಸ್ ನ್ಯಾಯಾಧೀಶ ಪಿ ಪಿ ಜಾಧವ್ ಇಂದು ತೀರ್ಪು ಪ್ರಕಟಿಸಿದರು.
ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ್ ಸಮಿತಿ ಸ್ಥಾಪಕರಾಗಿದ್ದ ದಾಭೋಲ್ಕರ್ ಅವರನ್ನು ಪುಣೆಯಲ್ಲಿ 2013ರಲ್ಲಿ ಅವರು ಬೆಳಗ್ಗಿನ ವಾಕಿಂಗ್‌ಗೆ ಹೋಗಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.
ಸನಾತನ ಸಂಸ್ಥೆ ಜೊತೆ ನಂಟು ಹೊಂದಿದ್ದ ಆರೋಪಿಗಳನ್ನು ಸಿಬಿಐ 2016 ಹಾಗೂ 2019 ನಡುವೆ ಬಂಧಿಸಿತ್ತು. ಈ ಪ್ರಕರಣವನ್ನು ಪುಣೆ ಪೊಲೀಸರಿಂದ ಸಿಬಿಐಗೆ 2014ರಲ್ಲಿ ಹಸ್ತಾಂತರಿಸಲಾಗಿತ್ತು. ಸಿಬಿಐ ಒಟ್ಟು 5 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಸದ್ಯ ತವಾಡೆ, ಅಂದೂರೆ ಮತ್ತು ಕಲಸ್ಕರ್ ನ್ಯಾಯಾಂಗ ಬಂಧನದಲ್ಲಿದ್ದರೆ ಭಾವೆ ಮತ್ತು ಪುನಲೇಕರ್ ಜಾಮೀನಿನ ಮೇಲಿದ್ದಾರೆ.