ಮುಸ್ಲಿಂ ಮತ ಧ್ರುವೀಕರಣಕ್ಕೆ ಕಾರಣವಾದ ನ್ಯಾಷನಲ್ ಕಾನ್ಫರೆನ್ಸ್ ಡಬಲ್ ಎಂಜಿನ್ ತಂತ್ರ!

Update: 2024-10-09 05:32 GMT

ಉಮರ್ ಅಬ್ದುಲ್ಲಾ PC: facebook.com/omarabdullah

ಶ್ರೀನಗರ: ಮುಸ್ಲಿಂ ಸಮುದಾಯದ ಭಿನ್ನ ಒಳಪಂಗಡಗಳಲ್ಲಿನ ಎರಡು ಆಧ್ಯಾತ್ಮಿಕ ಗುರುಗಳು ನ್ಯಾಷನಲ್ ಕಾನ್ಫರೆನ್ಸ್ ನ ಪ್ರಚಾರ ಅಭಿಯಾನದ ಎಂಜಿನ್ ಗಳಾಗಿ ಕಾರ್ಯ ನಿರ್ವಹಿಸಿದ ಪರಿಣಾಮ, ಮಹತ್ವದ ಚುನಾವಣೆಯಲ್ಲಿ ಉಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಪಿಡಿಪಿ, ಹೊಸ ಪಕ್ಷಗಳು ಮತ್ತು ಪಕ್ಷೇತರರ ಸವಾಲುಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಸಾಧ್ಯವಾಗಿದೆ.

ಆಯಾ ಪಂಗಡಗಳ ಧರ್ಮಗುರುಗಳಾದ ಅನಂತನಾಗ್-ರಾಜೌರಿ ಲೋಕಸಭಾ ಕ್ಷೇತ್ರದ ಸಂಸದ ಮಿಯಾನ್ ಅಲ್ತಾಫ್ ಅಹ್ಮದ್ ಮತ್ತು ಶ್ರೀನಗರ ಸಂಸದ ಸೈಯದ್ ಅಗಾ ಸೈಯದ್ ರೂಹುಲ್ಲಾ ಮೆಹ್ದಿ ಅವರು ಒಂದು ತಿಂಗಳ ಪ್ರಚಾರ ಅಭಿಯಾನದಲ್ಲಿ ಉಮರ್ ಅಬ್ದುಲ್ಲಾ ಜೊತೆ ಕೈಜೋಡಿಸಿದ್ದು ಅವರ ಪಕ್ಷಕ್ಕೆ ಸಾಕಷ್ಟು ಲಾಭ ತಂದುಕೊಟ್ಟಿದೆ.

ಮಿಯಾನ್ ಕುಟುಂಬವು ಕಾಶ್ಮೀರಿ ಮುಸ್ಲಿಮರಲ್ಲಿ ಅತ್ಯಂತ ಪವಿತ್ರ ಆಧ್ಯಾತ್ಮಿಕ ಪಂಗಡವಾದ ಗುಜ್ಜರ್-ಬಕರ್ವಾಲ್ ಸಮುದಾಯವನ್ನು ಪ್ರತಿನಿಧಿಸುತ್ತದೆ. ಕಾಶ್ಮೀರದಲ್ಲಿ ಈ ಸಮುದಾಯ ತನ್ನ ಅಸ್ತಿತ್ವ ಹೊಂದಿದ್ದರೂ, ಜಮ್ಮು ಪ್ರದೇಶದಲ್ಲಿ ಕೂಡಾ ದೊಡ್ಡ ಸಂಖ್ಯೆಯಲ್ಲಿದೆ. ಮಿಯಾನ್ ಅಲ್ತಾಫ್ ಅವರ ಪುತ್ರ ಮೆಹರ್ ಅಲಿ ತಮ್ಮ ಹಿಂದಿನ ಕನಗಾಂವ್ ಕ್ಷೇತ್ರದಿಂದ ಕಣಕ್ಕೆ ಇಳಿದ ಪರಿಣಾಮ ತಂದೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದು ಸಾಧ್ಯವಾಗಿರಲಿಲ್ಲ. ಪೂಂಚ್ ಹಾಗೂ ಇತರ ಪ್ರದೇಶಗಳಲ್ಲಿ ಅವರು ವಿಡಿಯೊ ಕರೆಯ ಮೂಲಕ ಪ್ರಚಾರ ಮಾಡಿ, ಮಗನ ಸ್ಪರ್ಧೆಯ ಕಾರಣದಿಂದ ಆಗಮಿಸಲು ಸಾಧ್ಯವಾಗುತ್ತಿಲ್ಲ ಎಂದು ಕ್ಷಮೆ ಯಾಚಿಸಿದ್ದರು.

ಅಗಾ ರೂಹುಲ್ಲಾ ಶಿಯಾ ಪಂಗಡದ ಯುವ ಹಾಗೂ ಗೌರವಾನ್ವಿತ ಧರ್ಮಗುರುವಾಗಿದ್ದು, ಈ ಸಮುದಾಯ ಶ್ರೀನಗರ- ಬುಡಗಾಂವ್ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿದೆ. ಈ ಎರಡೂ ಕಡೆಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಭರ್ಜರಿ ಗೆಲುವು ಸಾಧಿಸಿದೆ. ಈ ಎರಡು ಪಂಗಡಗಳ ಜತೆಗೆ ಜಮ್ಮು ಮುಸ್ಲಿಮರು ಕೂಡಾ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎನ್ನುವುದು ವಿಶ್ಲೇಷಕರ ಅಭಿಮತ. ಸಣ್ಣ ಹಾಗೂ ದೊಡ್ಡ ಗುಂಪುಗಳನ್ನು ಉದ್ದೇಶಿಸಿ ನಡೆಸಿದ ರಾಜಕೀಯ ಅಭಿಯಾನದಲ್ಲಿ ಇಡೀ ಧಾರ್ಮಿಕ ಛಾವಣಿಯಡಿ ಎಲ್ಲರನ್ನೂ ಸೇರಿಸುವ ಪ್ರಯತ್ನ ಮಾಡಿರುವುದು ಉಮರ್ ಅಬ್ದುಲ್ಲಾ ಅವರ ಪಕ್ಷದ ಯಶಸ್ಸಿಗೆ ಕಾರಣವಾಗಿದೆ.

ದಶಕದಿಂದ ಧಾರ್ಮಿಕ ಕಾರ್ಯಗಳ ಜತೆಗೆ ರಾಜಕೀಯ ಜವಾಬ್ದಾರಿಗಳನ್ನೂ ಈ ಎರಡೂ ಕುಟುಂಬಗಳು ನಿಭಾಯಿಸುತ್ತಾ ಬಂದಿವೆ. ಮಿಯಾನ್ ಕುಟುಂಬ 1951ರಿಂದ ಅಂದರೆ ಸಂಸದರ ಅಜ್ಜನ ಕಾಲದಿಂದ ಕನಗಾಂವ್ ಪ್ರದೇಶವನ್ನು ಪ್ರತಿನಿಧಿಸುತ್ತ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಅಹ್ಮದ್ ಅವರು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿಯವರನ್ನು ಅನಂತನಾಗ್ ನಿಂದ ಸೋಲಿಸಿದ್ದರು.

ಅಂತೆಯೇ ರೂಹುಲ್ಲಾ ಕುಟುಂಬ ಬುಡಗಾಂವ್ ರಾಜಕೀಯದಲ್ಲಿ ದಶಕಗಳಿಂದ ಸಕ್ರಿಯವಾಗಿದೆ. ಅವರ ತಂದೆಯನ್ನು ಉಗ್ರರು ಹತ್ಯೆ ಮಾಡಿದ್ದರು. ಮೂರು ಬಾರಿ ಶಾಸಕರಾಗಿದ್ದ ಇವರು ಎನ್ ಸಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು. 2024ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News