ನಾಗಾ ತಲೆಬುರುಡೆ ಹರಾಜು: ಬ್ರಿಟನ್ ಸರ್ಕಾರದ ಕ್ರಮಕ್ಕೆ ನಾಗಾಲ್ಯಾಂಡ್ ಸಿಎಂ ವಿರೋಧ

Update: 2024-10-09 02:41 GMT

PC: x.com/Pitt_Rivers

ಗುವಾಹತಿ: "19ನೇ ಶತಮಾನದಷ್ಟು ಹಳೆಯ ಕೋಡು ಹೊಂದಿರುವ ನಾಗಾ ಮನುಷ್ಯನ ತಲೆಬುರುಡುಡೆ" ಹರಾಜು ಮಾಡಲು ಮುಂದಾಗಿರುವ ಬ್ರಿಟನ್ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿರುವ ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫು ರಿಯೊ, ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸುವಂತೆ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಅವರನ್ನು ಆಗ್ರಹಿಸಿದ್ದಾರೆ.

ಟೆಟ್ಸ್ ವರ್ತ್ ಮೂಲದ ಸ್ವಾನ್ ಫೈನ್ ಆರ್ಟ್ಸ್ ವೆಬ್ ಸೈಟ್ ಬುಧವಾರ ಹರಾಜಿಗಿರುವ ವಸ್ತುಗಳ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ ಮಂಗಳವಾರ ಸಂಜೆ ಇದನ್ನು ಪಟ್ಟಿಯಿಂದ ಕಿತ್ತುಹಾಕಲಾಗಿದೆ.

ಈ ಹರಾಜನ್ನು ಸ್ಥಗಿತಗೊಳಿಸಲಾಗಿದೆಯೇ ಅಥವಾ ವೆಬ್ ಸೈಟ್ ನಿಂದ ತಲೆಬುರುಡೆಯನ್ನು ಮಾತ್ರ ಕಿತ್ತುಹಾಕಲಾಗಿದೆಯೇ ಎನ್ನುವ ಅಂಶ ದೃಢಪಟ್ಟಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಪಿಟ್ ರಿವರ್ಸ್ ಮ್ಯೂಸಿಯಂ ಈ ಬಗ್ಗೆ ಎಕ್ಸ್ ನಲ್ಲಿ ಹೇಳಿಕೆ ನೀಡಿ, "ನಾಗಾ ಪೂರ್ವಜರ ಈ ಪಳೆಯುಳಿಕೆಯನ್ನು ಮಾರಾಟದಿಂದ ಹಿಂದಕ್ಕೆ ಪಡೆಯಲಾಗಿದೆ" ಎಂದು ಸ್ಪಷ್ಟಪಡಿಸಿದೆ.

ಕ್ಯಾಲಿಫೋರ್ನಿಯಾ ಮೂಲದ ನಾಗಾ ಪ್ರೊಫೆಸರ್ ಹಾಗೂ ಮಾನವಶಾಸ್ತ್ರ ತಜ್ಞ ಡಾಲಿ ಕಿಕಾನ್ ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ, ಈ ಅಪರೂಪದ ತಲೆಬುರುಡೆ 21ನೇ ಶತಮಾನದ ಸಂಗ್ರಹಯೋಗ್ಯ ಪಳೆಯುಳಿಕೆ ಎಂದಿದ್ದರು.

"ಯಾವುದೇ ಮೃತ ವ್ಯಕ್ತಿಯ ಅವಶೇಷಗಳು ಆಯಾ ನೆಲದ ಜನರಿಗೆ ಸೇರುವಂಥದ್ದು. ಇದಕ್ಕಿಂತ ಹೆಚ್ಚಾಗಿ ಮಾನವ ಅವಶೇಷಗಳನ್ನು ಹರಾಜು ಮಾಡುವುದು ಜನರ ಭಾವನೆಗಳನ್ನು ಘಾಸಿಗೊಳಿಸುವಂಥದ್ದು. ಇದು ನಮ್ಮ ಜನರ ಮೇಲಿನ ಸಾಮ್ರಾಜ್ಯಶಾಹಿ ಹಿಂಸೆ ಮುಂದುವರಿದಿದೆ ಎನ್ನುವುದನ್ನು ಬಿಂಬಿಸುತ್ತದೆ" ಎಂದು ಮುಖ್ಯಮಂತ್ರಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News