ಹರ್ಯಾಣದಲ್ಲಿ ಕಾಂಗ್ರೆಸ್ ಗೆ ಸೋಲು; ಇತರ ರಾಜ್ಯಗಳ ಮೇಲೆ ಏನು ಪರಿಣಾಮ?

Update: 2024-10-09 03:11 GMT

PC : PTI

ಹೊಸದಿಲ್ಲಿ: ಹರ್ಯಾಣದಲ್ಲಿ ಕಾಂಗ್ರೆಸ್ ಪಕ್ಷದ ಅನಿರೀಕ್ಷಿತ ಸೋಲು ಇಂಡಿಯಾ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದ್ದರೂ, ಮಿತ್ರಕೂಟದ ಅಂಗಪಕ್ಷಗಳಾದ ಪ್ರಾದೇಶಿಕ ಪಕ್ಷಗಳಿಗೆ ಇದರಿಂದ ಹೆಚ್ಚಿನ ಬಲ ಬಂದಿರುವುದು ಸ್ಪಷ್ಟವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗಳ ವೇಳೆ ಮೈತ್ರಿ ಒಪ್ಪಂದಗಳನ್ನು ಮಾಡಿಕೊಳ್ಳುವ ವೇಳೆ ಈ ಪಕ್ಷಗಳ ಕೈ ಮೇಲಾಗುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗೆದ್ದ ಬಳಿಕ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಕಾಂಗ್ರೆಸ್ ಪಕ್ಷ, ಇತರ ಸಣ್ಣಪಕ್ಷಗಳ ಬೇಡಿಕೆಗಳನ್ನು ಮೂಲೆಗುಂಪು ಮಾಡುತ್ತಾ ಬಂದಿತ್ತು. ಈ ಅನಿರೀಕ್ಷಿತ ಫಲಿತಾಂಶ, ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ಸೀಟು ಹಂಚಿಕೆಯಲ್ಲಿ ಮಹತ್ವದ ಅಂಶವಾಗಲಿದೆ.

ಬಿಜೆಪಿಯ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ, "ಅಧಿಕಾರ ವಿರೋಧಿ ಅಲೆಯ ನಡುವೆಯೂ ಬಿಜೆಪಿ ಗೆಲುವಿನ ಹಾದಿಯಲ್ಲಿದೆ. ಕಾಂಗ್ರೆಸ್ ಪಕ್ಷ ತನ್ನ ರಣತಂತ್ರವನ್ನು ಪುನರ್ ಪರಿಶೀಲಿಸಬೇಕು ಎಂಬ ಅಂಶವನ್ನು ಇದು ತೋರಿಸುತ್ತದೆ. ಆತ್ಮಾವಲೋಕನ ಮತ್ತು ಬಿಜೆಪಿ ಜತೆ ನೇರ ಸ್ಪರ್ಧೆ ಏರ್ಪಟ್ಟಾಗಲೆಲ್ಲ ಕಾಂಗ್ರೆಸ್ ದರ್ಬಲ ಎನಿಸುತ್ತದೆ. ಇಡೀ ಮಿತ್ರಕೂಟವನ್ನು ಪುನರ್ ಸಂಘಟಿಸಬೇಕಾದ ಅಗತ್ಯವಿದೆ" ಎಂದು ಹೇಳಿದ್ದರು.

ಮಹಾರಾಷ್ಟ್ರದಲ್ಲಿ ಶಿವಸೇನೆ-ಯುಬಿಟಿ ಮತ್ತು ಎನ್ ಸಿಪಿ ಜತೆ ಸ್ಥಾನ ಹೊಂದಾಣಿಕೆ ಮಾತುಕತೆಗಳು ಪ್ರಗತಿ ಹಂತದಲ್ಲಿದ್ದು, ಠಾಕ್ರೆಯವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂಬ ಒತ್ತಡವೂ ಆ ಪಕ್ಷದಿಂದ ಇದೆ.

ಹರ್ಯಾಣದ ಸೋಲು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳಪೆ ಪ್ರದರ್ಶನದಿಂದಾಗಿ ಮೈತ್ರಿಕೂಟದಲ್ಲಿ ಹೆಚ್ಚಿನ ಸಹಕಾರದ ದೃಷ್ಟಿಕೋನಕ್ಕೆ ಪಕ್ಷ ಶರಣಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News