ಹರ್ಯಾಣದಲ್ಲಿ ಸೋಲು: ಕಾಂಗ್ರೆಸ್ ನ ಚುನಾವಣಾ ತಂತ್ರವನ್ನು ಪ್ರಶ್ನಿಸಿದ INDIA ಮಿತ್ರಪಕ್ಷಗಳು
ಹೊಸದಿಲ್ಲಿ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನೆಡೆಯಾಗಿರುವ ಕಾರಣ ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳು ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರವನ್ನು ಪ್ರಶ್ನಿಸಿದ್ದು, ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ಪಕ್ಷವು ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದಿಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ತನ್ನ ಕಾರ್ಯತಂತ್ರವನ್ನು ಮರುಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 90 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದುಕೊಂಡಿದೆ. ಆಡಳಿತ ವಿರೋಧಿ ಅಲೆಗಳ ಕಾರಣದಿಂದ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಲಾಗಿದ್ದ ಕಾಂಗ್ರೆಸ್ 37 ಸ್ಥಾನಗಳಿಗೆ ತೃಪ್ತಿ ಪಡುವಂತಾಗಿದೆ.
ಚುನಾವಣಾ ಫಲಿತಾಂಶದ ಬಗ್ಗೆ ಎಎಪಿ ನಾಯಕರು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದು, ಒಬ್ಬರು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರಬಾರದು ಎನ್ನುವುದು ಚುನಾವಣೆಯ ಸೋಲಿನಿಂದ ಕಲಿಯಬಹುದಾದ ದೊಡ್ಡ ಪಾಠ ಎಂದು ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಕಾಂಗ್ರೆಸ್ ನ ಅತಿಯಾದ ಆತ್ಮವಿಶ್ವಾಸದ ಬಗ್ಗೆ ವ್ಯಂಗ್ಯವಾಡಿದರೆ, ಹರ್ಯಾಣದ ಜನರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಬಯಸಿದ್ದರು ಆದರೆ ಅವರ ಚುನಾವಣಾ ತಂತ್ರದಲ್ಲಿನ ಸಮಸ್ಯೆಗಳಿಂದ ಕಾಂಗ್ರೆಸ್ ಗೆಲ್ಲಲು ವಿಫಲವಾಗಿದೆ ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಇನ್ನು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಸಿಪಿಐ ಕೂಡ ಹರ್ಯಾಣದಲ್ಲಿ ಕಾಂಗ್ರೆಸ್ ಅಳವಡಿಸಿಕೊಂಡ ತಂತ್ರವನ್ನು ಪ್ರಶ್ನಿಸಿವೆ.
ಮಹಾರಾಷ್ಟ್ರದಲ್ಲಿ ನಡೆಯಲಿರುವ ಚುನಾವಣೆ ಮೇಲೆ ಹರ್ಯಾಣದ ಫಲಿತಾಂಶ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೆ ಕಾಂಗ್ರೆಸ್ ತನ್ನ ಚುನಾವಣಾ ಕಾರ್ಯತಂತ್ರವನ್ನು ಮರುಪರಿಶೀಲಿಸಬೇಕು ಎಂದು ಶಿವಸೇನೆ(ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.
ಹರ್ಯಾಣ ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಗಂಭೀರ ಅವಲೋಕನ ಮಾಡಬೇಕಿದೆ. ಮುಂದಿನ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರನ್ನು ಕಾಂಗ್ರೆಸ್ ಒಟ್ಟಾಗಿ ಕರೆದುಕೊಂಡು ಹೋಗಬೇಕು ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಆಗ್ರಹಿಸಿದ್ದಾರೆ.