ಹರ್ಯಾಣದ ಹಿಸ್ಸಾರ್‌ನಲ್ಲಿ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಗೆಲುವು

Update: 2024-10-08 15:39 GMT

ಸಾವಿತ್ರಿ ಜಿಂದಾಲ್ |  PC : PTI  

ಹಿಸ್ಸಾರ್ : ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಹಿಸ್ಸಾರ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು ಹಿರಿಯ ಬಿಜೆಪಿ ನಾಯಕ ಹಾಗೂ ಹಾಲಿ ಶಾಸಕ ಕಮಲ ಗುಪ್ತಾರನ್ನು 18,941 ಮತಗಳ ಅಂತರದಿಂದ ಸೋಲಿಸಿ ವಿಜಯದ ನಗೆಯನ್ನು ಬೀರಿದ್ದಾರೆ. ಸಾವಿತ್ರಿ ಜಿಂದಾಲ್ ಅವರ ಪುತ್ರ ನವೀನ ಜಿಂದಾಲ್ ಬಿಜೆಪಿಯ ಕುರುಕ್ಷೇತ್ರ ಸಂಸದರಾಗಿದ್ದಾರೆ.

ಜಿಂದಾಲ್ ಗ್ರೂಪ್‌ನ ಗೌರವಾಧ್ಯಕ್ಷೆಯಾಗಿರುವ ಸಾವಿತ್ರಿ ಜಿಂದಾಲ್ ಬಿಜೆಪಿಯಿಂದ ಟಿಕೆಟ್ ಪಡೆಯಲು ವಿಫಲಗೊಂಡ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಸೆ.28ರಂದು ಬಿಡುಗಡೆಗೊಂಡ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಂತೆ 36.3 ಶತಕೋಟಿ ಡಾ.ನಿವ್ವಳ ಮೌಲ್ಯವನ್ನು ಹೊಂದಿರುವ ಸಾವಿತ್ರಿ ಜಿಂದಾಲ್ ಭಾರತದ ಐದನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರು ದೇಶದ ಅತ್ಯಂತ ಶ್ರೀಮಂತ ಮಹಿಳೆ ಮತ್ತು ಭಾರತದ ಹತ್ತು ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಏಕೈಕ ಮಹಿಳೆಯೂ ಆಗಿದ್ದಾರೆ.

2005ರಲ್ಲಿ ಪತಿ ಓಂ ಪ್ರಕಾಶ ಜಿಂದಾಲ್ ನಿಧನದ ಬಳಿಕ ಸಾವಿತ್ರಿ ಜಿಂದಾಲ್ ಉಕ್ಕು ಉತ್ಪಾದನೆ,ವಿದ್ಯುತ್ ಉತ್ಪಾದನೆ,ಗಣಿಗಾರಿಕೆ ಮತ್ತು ಬಂದರು ಉದ್ಯಮದಲ್ಲಿ ತೊಡಗಿಕೊಂಡಿರುವ ಜಿಂದಾಲ್ ಗ್ರೂಪ್‌ನ ನೇತೃತ್ವವನ್ನು ವಹಿಸಿಕೊಂಡಿದ್ದರು.

ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ 74ರ ಹರೆಯದ ಸಾವಿತ್ರಿ ಜಿಂದಾಲ್ ಈಗಾಗಲೇ ಎರಡು ಸಲ ಹಿಸ್ಸಾರ್ ಶಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. 2005ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದ ಅವರು 2009ರಲ್ಲಿ ಪುನರಾಯ್ಕೆಗೊಂಡು ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಸರಕಾರದಲ್ಲಿ ಸಚಿವೆಯಾಗಿದ್ದರು. ಸುಮಾರು ಎರಡು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಅವರು ಮಾರ್ಚ್‌ನಲ್ಲಿ ಪುತ್ರ ನವೀನ್ ಜಿಂದಾಲ್ ಹೆಜ್ಜೆಗುರುತುಗಳನ್ನು ಅನುಸರಿಸಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News