ಗುಡ್ಡಗಾಡು ಗ್ರಾಮಕ್ಕೆ 100 ಕಿ.ಮೀ ಚಾರಣ ಮಾಡಿದರೂ ದಕ್ಕಿದ್ದು 4 ಮತ!
ಪಿತೋರ್‍ಗಢ: ಉತ್ತರಾಖಂಡದ ಅತ್ಯಂತ ಗುಡ್ಡಗಾಡು ಪ್ರದೇಶದ ಮತಗಟ್ಟೆ ಎನಿಸಿದ ಕನಾರ್ ಗ್ರಾಮ ತಲುಪಲು ಚುನವಣಾ ಸಿಬ್ಬಂದಿಯ ತಂಡ ನಾಲ್ಕು ದಿನಗಳ ಚಾರಣ ಕೈಗೊಂಡರು. ಆದರೆ 587 ನೋಂದಾಯಿತ ಮತದಾರರು ಇದ್ದ ಈ ಗ್ರಾಮದಲ್ಲಿ ಚಲಾವಣೆಯಾದ ಮತಗಳು ಕೇವಲ ನಾಲ್ಕು!
ಇವರ ಜತೆಗೆ ಶುಕ್ರವಾರ ನಾಲ್ಕು ಮಂದಿ ಚುನಾವಣಾ ಸಿಬ್ಬಂದಿ ಕೂಡಾ ಇದೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮತದಾನ ಪ್ರಕ್ರಿಯೆ ಮುಗಿಸಿದ ತಂಡ ಶನಿವಾರ ಪಿತೋರ್‍ಗಢಕ್ಕೆ ವಾಪಸ್ಸಾಯಿತು. ಈ ಗ್ರಾಮಕ್ಕೆ ಕನಿಷ್ಠ ಸೌಕರ್ಯವಾದ ರಸ್ತೆ ನಿರ್ಮಿಸಬೇಕು ಎಂಬ ಬೇಡಿಕೆಗೆ ಆಡಳಿತ ಪಕ್ಷ ಸ್ಪಂದಿಸದೇ ಇದ್ದ ಕಾರಣ ಇಲ್ಲಿನ ಮತದಾರರು ಪ್ರತಿಭಟನೆ ಕೈಗೊಂಡು ಮತದಾನ ಬಹಿಷ್ಕರಿಸಿದರು.
ಕುತೂಹಲದ ಅಂಶವೆಂದರೆ 2019ರ ಚುನಾವಣೆಯಲ್ಲೂ ಗ್ರಾಮಸ್ಥರು ಇದೇ ಬೇಡಿಕೆ ಮುಂದಿಟ್ಟು ಮತದಾನ ಬಹಿಷ್ಕರಿಸಿದ್ದರು. ಆಗ ಯಾವ ಮತವೂ ಚಲಾವಣೆಯಾಗಿರಲಿಲ್ಲ. ಆದರೆ ಈ ಬಾರಿ ನಾಲ್ಕು ಮತಗಳು ಚಲಾವಣೆಯಾದವು.
ಚುನಾವಣಾ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮತ್ತು ಮ್ಯಾಜಿಸ್ಟ್ರೇಟ್ ಸೇರಿದಂತೆ 21 ಮಂದಿಯ ಚುನಾವಣಾ ತಂಡ ಕಳೆದ ಮಂಗಳವಾರ ಪಿತೋರ್‍ಗಢದಿಂದ ಈ ಕುಗ್ರಾಮಕ್ಕೆ ಯಾತ್ರೆ ಕೈಗೊಂಡಿತ್ತು. ಹಳ್ಳಕೊಳ್ಳಗಳು, ಕಣಿವೆಗಳನ್ನು ದಾಟಿಕೊಂಡು 80 ಕಿಲೋಮೀಟರ್ ಪ್ರಯಾಸದ ಪ್ರಯಾಣದ ಬಳಿಕ ಕನಾರ್‍ಗೆ ಅತ್ಯಂತ ಸಮೀಪದ ರಸ್ತೆ ಸಂಪರ್ಕ ಎನಿಸಿದ ಬರಾಮ್‍ಗೆ ತಲುಪಿತ್ತು. ಬಳಿಕ ಪ್ರಾಥಮಿಕ ಶಾಲೆಯೊಂದರಲ್ಲಿ ರಾತ್ರಿ ಕಳೆಯಿತು.
ಬುಧವಾರ ಮುಂಜಾನೆ ಕನಾರ್‍ಗೆ ಚಾರಣ ಕೈಗೊಂಡಿತು. ನಾಲ್ಕು ಮಂದಿ ಹಮಾಲಿಗಳು, ಇವಿಎಂಗಳು ಮತ್ತು ಇತರ ಅಗತ್ಯ ಚುನಾವಣಾ ಪರಿಕರಗಳೊಂದಿಗೆ ತಂಡ ಪ್ರಯಾಣ ಬೆಳೆಸಿತು. 16 ಕಿಲೋಮೀಟರ್ ಚಾರಣ ಕೈಗೊಂಡು ಬುಧವಾರ ರಾತ್ರಿ 8ಕ್ಕೆ ಕನಾರ್ ತಲುಪಿತು. ಸರ್ಕಾರಿ ಶಾಲೆಯಲ್ಲಿ ವಿಶ್ರಾಂತಿ ಪಡೆದು ಗುರುವಾರ ಮತಗಟ್ಟೆ ಸಜ್ಜುಗೊಳಿಸಿತು. ಇವರ ಪಯಣದಲ್ಲಿ ಭೋಜನ ಮಾತೆಯರು ಇವರಿಗೆ ಆಹಾರ ವ್ಯವಸ್ಥೆ ಮಾಡಿದ್ದರು.
"ನಾವು ಕಠಿಣ ಹಾದಿಯಲ್ಲಿ ನಾಲ್ಕು ದಿನಗಳನ್ನು ಕಳೆದು 80 ಕಿಲೋಮೀಟರ್ ಬಸ್ ಪ್ರಯಾಣ, 16 ಕಿಲೋಮೀಟರ್ ಪಾದಯಾತ್ರೆ ಕೈಗೊಂಡು 1800 ಮೀಟರ್ ಎತ್ತರಕ್ಕೆ ಏರಿದೆವು. ಆದರೆ ಕೇವಲ ನಾಕು ಮತಗಳೊಂದಿಗೆ ವಾಪಸ್ಸಾದದ್ದು ತೀರಾ ಬೇಸರ ತಂದಿದೆ" ಎಂದು ಅಧಿಕಾರಿ ಹಾಗೂ ಶಿಕ್ಷಕ ಮನೋಜ್ ಕುಮಾರ್ ಹೇಳಿದರು.