“ವಂಚನೆಯ ಮೂಲಕ ಪಡೆದುಕೊಳ್ಳಲಾಗಿತ್ತು”: ತನ್ನ ಮೇ 2022ರ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Update: 2024-01-08 09:02 GMT

ಹೊಸದಿಲ್ಲಿ: ಬಿಲ್ಕಿಸ್‌ ಬಾನು ಹತ್ಯೆ ಪ್ರಕರಣದ 11 ಮಂದಿ ಅಪರಾಧಿಗಳಿಗೆ ತಮಗೆ ನೀಡಲಾದ ಶಿಕ್ಷೆ ಕಡಿತಗೊಳಿಸುವಂತೆ ಗುಜರಾತ್‌ ಸರ್ಕಾರಕ್ಕೆ ಮನವಿ ಸಲ್ಲಿಸಲು ಅನುಮತಿಸಿ ಮೇ 2022ರಂದು ತಾನು ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಇಂದು ರದ್ದುಗೊಳಿಸಿದೆ. ಈಗ ನಿವೃತ್ತರಾಗಿರುವ ಜಸ್ಟಿಸ್‌ ಅಜಯ್‌ ರಸ್ತೋಗಿ ಅಂದು ಆದೇಶ ನೀಡಿದ್ದರು.

ಆ ಆದೇಶವನ್ನು ವಂಚನೆಯ ಮೂಲಕ ಹಾಗೂ ವಾಸ್ತವಗಳನ್ನು ಮರೆಮಾಡಿ ಪಡೆಯಲಾಗಿತ್ತು ಎಂದು ಹೇಳಿದ ಸುಪ್ರೀಂ ಕೋರ್ಟ್‌, ಅಪರಾಧಿಗಳ ಬಿಡುಗಡೆಯನ್ನು ಮರುಪರಿಶೀಲಿಸಲು ಅರ್ಜಿ ಸಲ್ಲಿಸದೇ ಇರುವುದಕ್ಕೆ ಗುಜರಾತ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಪರಾಧಿಗಳ ವಿಚಾರಣೆಯು ಮಹಾರಾಷ್ಟ್ರ ನ್ಯಾಯಾಲಯದಲ್ಲಿ ನಡೆದಿದ್ದರಿಂದ ಮಹಾರಾಷ್ಟ್ರ ಸರ್ಕಾರ ಮಾತ್ರ ಅವರ ಶಿಕ್ಷೆ ಕಡಿತಗೊಳಿಸುವ ಹಕ್ಕು ಹೊಂದಿತ್ತು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅಪರಾಧಿಗಳಲ್ಲೊಬ್ಬ ರಾಧೇಶ್ಯಾಮ್‌ ಭಗವಾನ್‌ದಾಸ್‌ ಶಾ ಎಂಬಾತ ಶಿಕ್ಷೆ ಕಡಿತಗೊಳಿಸಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಕೋರಿದ ಅನುಮತಿಯನ್ನು ಜುಲೈ 2019ರಲ್ಲಿ ಗುಜರತ್‌ ಹೈಕೋರ್ಟ್‌ ನಿರಾಕರಿಸಿದ ನಂತರ ಸಲ್ಲಿಸಿದ್ದ ಅರ್ಜಿ ಇದಾಗಿತ್ತು.

ಆತ ಮಹಾರಾಷ್ಟ್ರ ನ್ಯಾಯಾಲಯದಲ್ಲಿ ಅಪೀಲು ಸಲ್ಲಿಸಿದ್ದರೂ ನಿರ್ಧಾರ ಪ್ರಕಟಗೊಳ್ಳುವ ಮುನ್ನವೇ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದ.

ಈ ಹಿಂದೆ ಆಗಸ್ಟ್‌ ತಿಂಗಳಿನಲ್ಲಿ ತನ್ನ ಮೇ 2022 ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್‌ ಅಚ್ಚರಿ ವ್ಯಕ್ತಪಡಿಸಿತ್ತು.

ಗುಜರಾತ್‌ ಸರ್ಕಾರ ಅಪರಾಧಿಗಳ ಬಿಡುಗಡೆಗೆ ನೀಡಿರುವ ಆದೇಶವನ್ನು ಇಂದು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ ಅವರಿಗೆ ಜೈಲಿಗೆ ಮರಳಲು ಎರಡು ವಾರಗಳ ಕಾಲಾವಕಾಶ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News