ವಿಧಾನಸಭಾ ಚುನಾವಣೆಯ ಸೋಲಿನಿಂದ ವಿಪಕ್ಷಗಳು ಧೃತಿಗೆಟ್ಟಿವೆ: ಪ್ರಧಾನಿ ಮೋದಿ
ಹೊಸದಿಲ್ಲಿ: ಸಂಸತ್ ಭದ್ರತಾ ವೈಫಲ್ಯ ಕುರಿತು ಸದನದಲ್ಲಿ ಚರ್ಚೆ ನಡೆಸಲು ಮತ್ತು ಗೃಹ ಸಚಿವರ ಹೇಳಿಕೆಗೆ ಆಗ್ರಹಿಸಿ ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಯ ವಿರುದ್ಧ ಕಿಡಿ ಕಾರಿರುವ ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗೆ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಕಂಡ ವೈಫಲ್ಯದಿಂದ ವಿಪಕ್ಷಗಳು ಧೃತಿಗೆಟ್ಟಿವೆ ಎಂದು ಹೇಳಿದರು. ಪ್ರಧಾನಿ ಬಿಜೆಪಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
“ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ನಂಬಿಕೆಯಿರಿಸಿರುವ ಪ್ರತಿಯೊಬ್ಬರೂ ಸಂಸತ್ ಭದ್ರತಾ ವೈಫಲ್ಯವನ್ನು ಒಕ್ಕೊರಲಿನಿಂದ ಖಂಡಿಸಬೇಕಿತ್ತು. ಆದರೆ ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ನಂಬಿಕೆಯಿರಿಸಿರುವ ಪಕ್ಷವೊಂದು ಹೇಗೆ ಅದನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಮರ್ಥಿಸಿಕೊಳ್ಳಬಹುದು?” ಎಂದು ಅವರು ಪ್ರಶ್ನಿಸಿದರು.
“ಕೆಲವು ಪಕ್ಷಗಳು ಸಂಸತ್ ಭದ್ರತಾ ವೈಫಲ್ಯವನ್ನು ಒಂದು ವಿಧದಲ್ಲಿ ಬೆಂಬಲಿಸುತ್ತಿವೆ. ಇದು ಈ ಘಟನೆಯಷ್ಟೇ ಅಪಾಯಕಾರಿಯಾಗಿದೆ,” ಎಂದು ಪ್ರಧಾನಿ ಹೇಳಿದರು.
ವಿಪಕ್ಷ ನಾಯಕರು ಸಂಯಮದಿಂದ ಇದ್ದು ಪ್ರಜಾಪ್ರಭುತ್ವ ನಿಯಮಗಳನ್ನು ಪಾಲಿಸಬೇಕು ಎಂದು ಪ್ರಧಾನಿ ಹೇಳಿದರು.